ಬೆಂಗಳೂರು:ಮೆಟ್ರೋ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೆ ನಗರದಲ್ಲಿ ತೆರವುಗೊಳಿಸಿರುವ ಮರಗಳಿಗೆ ಪರ್ಯಾಯವಾಗಿ ಸಸಿಗಳನ್ನು ನೆಟ್ಟಿರುವ ಕುರಿತು ಮಾಹಿತಿ ನೀಡದೇ ಇರುವುದಕ್ಕೆ ಬಿಬಿಎಂಪಿಯನ್ನು ಹೈಕೋರ್ಟ್ ತರಾಟೆ ತೆಗೆದುಕೊಂಡಿದೆ. ಸಸಿಗಳನ್ನು ನೆಟ್ಟಿರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಅವುಗಳ ಸ್ಥಿತಿಗತಿಯ ಕುರಿತು ಎರಡು ವಾರದಲ್ಲಿ ವರದಿ ಸಲ್ಲಿಸಬೇಕು ಎಂದು ಪಾಲಿಕೆಯ ಮರ ಅಧಿಕಾರಿ ಮತ್ತು ಬೆಂಗಳೂರು ನಗರ ಅರಣ್ಯ ಉಪ ಸಂರಕ್ಷಣಾಧಿಕಾರಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.
ಮೆಟ್ರೋ ಕಾಮಗಾರಿಗಾಗಿ ಮರ ಕಡಿಯುವುದನ್ನು ಆಕ್ಷೇಪಿಸಿ ಟಿ.ದತ್ತಾತ್ರೇಯ ದೇವರ ಮತ್ತು ಬೆಂಗಳೂರು ಪರಿಸರ ಟ್ರಸ್ಟ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ವಿಚಾರಣೆಯ ವೇಳೆ, ಮೆಟ್ರೋ ನಿಗಮದ ಪರ ವಕೀಲರು ಹಾಜರಾಗಿ, ಮೆಟ್ರೋ ರೈಲು ಮಾರ್ಗ ನಿರ್ಮಾಣಕ್ಕಾಗಿ 381 ಮರಗಳನ್ನು ಕತ್ತರಿಸಲು ಹಾಗೂ 26 ಮರಗಳನ್ನು ಸ್ಥಳಾಂತರಿಸಲು ಅನುಮತಿ ನೀಡುವಂತೆ ಕೋರಿದರು. ಅರ್ಜಿದಾರರ ಪರ ವಕೀಲರು, ಈ ಹಿಂದೆ ಮರಗಳನ್ನು ಕತ್ತರಿಸಲು ಅನುಮತಿ ನೀಡಿದ್ದಾಗ ಪರ್ಯಾಯವಾಗಿ ಸಸಿಗಳನ್ನು ನೆಡಲು ಮತ್ತು ಅರಣ್ಯೀಕರಣ ಮಾಡಲು ಸೂಚಿಸಿ ಹೈಕೋರ್ಟ್ ಹೊರಡಿಸಿದ ನಿರ್ದೇಶನಗಳನ್ನು ಬಿಎಂಆರ್‌ಸಿಎಲ್ ಪಾಲಿಸಿಲ್ಲ. ಸಸಿಗಳನ್ನು ನೆಟ್ಟಿರುವ ಬಗ್ಗೆ ನ್ಯಾಯಾಲಯಕ್ಕೆ ಯಾವುದೇ ಮಾಹಿತಿ ನೀಡಿಲ್ಲ ಎಂದರು.