ಬೆಂಗಳೂರು: ಮಂಗಳೂರಿನ ಶ್ರೀನಿವಾಸ ದಂತ ವಿಜ್ಞಾನಗಳ ಸಂಸ್ಥೆಯಲ್ಲಿ ದಂತ ವೈದ್ಯಕೀಯ ಪದವಿಗೆ (ಬಿಡಿಎಸ್) ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿನಿಯೊಬ್ಬರ ದಾಖಲಾತಿಯನ್ನು ಅನುಮೋದಿಸುವಂತೆ ಹೈಕೋರ್ಟ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (Karnataka Examinations Authority) ನಿರ್ದೇಶನ ನೀಡಿದೆ.
ಬಿಡಿಎಸ್ ಪ್ರವೇಶಾತಿಯನ್ನು ಅನುಮೋದಿಸದ ಆರ್‌ಜಿಯುಹೆಚ್‌ಎಸ್ ಕ್ರಮ ಪ್ರಶ್ನಿಸಿ ವಿದ್ಯಾರ್ಥಿನಿ ನಿಧಿ ಎಸ್. ಶೆಟ್ಟಿಗಾರ್ (Nidhi S Shettigar) ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ. ವಿದ್ಯಾರ್ಥಿನಿ ಪ್ರವೇಶಾತಿಯನ್ನು 3 ವಾರದಲ್ಲಿ ಅನುಮೋದಿಸಬೇಕು. ಪದವಿ ವ್ಯಾಸಂಗ ಮುಂದುವರಿಸಲು ಮತ್ತು ನವೆಂಬರ್ 16 ರಿಂದ ಆರಂಭವಾಗುವ 2ನೇ ವರ್ಷದ ಪರೀಕ್ಷೆ ಬರೆಯಲು ಅನುಮತಿಸಬೇಕು. ವಿದ್ಯಾರ್ಥಿನಿ ಈಗಾಗಲೇ ಬರೆದಿರುವ ಪ್ರಥಮ ವರ್ಷದ ಫಲಿತಾಂಶವನ್ನು ಪ್ರಕಟಿಸಬೇಕು ಎಂದು ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿದೆ.