ಬೆಂಗಳೂರು: ಉತ್ತರಾಧಿಕಾರಿ ಪ್ರಮಾಣಪತ್ರ ಮಂಜೂರು ಮಾಡಿರುವುದು ಹಕ್ಕುಗಳನ್ನು ನಿರ್ಧರಿಸುವುದಕ್ಕೆ ಮಾನದಂಡವಾಗುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಕಲಬುರಗಿಯ ದಿವಂಗತ ನಾಗಪ್ಪ ಸವಡಿಯ ವೃದ್ಧ ತಂದೆ ತಾಯಿಗಳಾದ ಗಂಗಮ್ಮ ಮತ್ತು ಗುರುಪಾದಪ್ಪ ಸವಡಿ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ.ಎಂ.ಜೋಷಿ ಅವರಿದ್ದ ಏಕ ಸದಸ್ಯಪೀಠ ಮೃತ ವ್ಯಕ್ತಿಯ ಸೇವಾ ಭತ್ಯೆಗಳನ್ನು ಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಿದೆ. ಅಲ್ಲದೆ, ಉತ್ತರದಾಯಿತ್ವ ಪ್ರಮಾಣಪತ್ರ ವಿತರಣೆ ವ್ಯಕ್ತಿಯ ಸಾವಿನ ನಂತರದ ಭತ್ಯೆ ಮತ್ತು ಸಾಲಗಳನ್ನು ಯಾರಿಗೆ ನೀಡಬೇಕು ಎಂಬ ಬಗ್ಗೆ ಗುರುತಿಸಲು ಮಾತ್ರ. ಆದರೆ ಅದನ್ನೇ ಮುಂದಿಟ್ಟುಕೊಂಡು ಹಕ್ಕು ಮಂಡಿಸಲಾಗದು ಎಂದು ಪೀಠ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಎರಡೂ ಅಧೀನ ನ್ಯಾಯಾಲಯಗಳು ಪೋಷಕರನ್ನು ಒಂದನೇ ದರ್ಜೆ ಉತ್ತರದಾಯಿಗಳೆಂದು ಒಪ್ಪಿಕೊಂಡಿದೆ. ಹಾಗಾಗಿ ಉತ್ತರದಾಯಿತ್ವ ಪ್ರಮಾಣಪತ್ರವನ್ನು ಜಂಟಿ ಹೆಸರಿನಲ್ಲಿ ನೀಡಬೇಕಾಗಿತ್ತು ಮತ್ತು ಅದರಲ್ಲಿ ಸೇವಾ ಭತ್ಯೆಯಲ್ಲಿ ಯಾರ‍್ಯಾರಿಗೆ ಎಷ್ಟೆಷ್ಟು ಪಾಲು ಎಂಬುದನ್ನು ನಿರ್ಧರಿಸುವ ವಿಚಾರ ಪೋಷಕರು ಮತ್ತು ಪತ್ನಿ ಹಾಗೂ ಮಗುವಿಗೆ ಬಿಡಬೇಕಾಗಿತ್ತು ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.