ಬೆಂಗಳೂರು : ಮಹಾರಾಷ್ಟ್ರ ರಾಜ್ಯದಂತೆ ಕರ್ನಾಟಕದಲ್ಲಿಯೂ ವಿದೇಶದಲ್ಲಿ ಪಡೆದ ವೈದ್ಯಕೀಯ ಪದವಿಗಳನ್ನು ಮಾನ್ಯ ಮಾಡಬೇಕಾದ ಅಗತ್ಯವಿಲ್ಲ ಎಂದು ಹೈಕೋರ್ಟ್ ಆದೇಶಿತು. ಚೀನಾದ ಮೆಡಿಕಲ್ ಕಾಲೇಜೊಂದರಲ್ಲಿ ವೈದ್ಯಕೀಯ ಪದವಿ ಪಡೆದಿದ್ದ ಡಾ.ಸತ್ಯಕ್ ಎಂಬುವರು ತಮ್ಮ ಪದವಿ ಅಂಗೀಕರಿಸುವಂತೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಮನವಿ ಮಾಡಿದ್ದರು. ಈ ಮನವಿಯನ್ನು ಆರೋಗ್ಯ ಇಲಾಖೆ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ್ ರಾಮನಾಥ್ ಹೆಗಡೆ ಅವರಿದ್ದ ಏಕ ಸದಸ್ಯಪೀಠ ಆದೇಶ ನೀಡಿದೆ. ಅಲ್ಲದೇ, ವಿದೇಶಗಳ ವಿಶ್ವವಿದ್ಯಾಲಯಗಳು ನೀಡುವ ವೈದ್ಯಕೀಯ ಪದವಿಗಳನ್ನು ಉದ್ಯೋಗಕ್ಕೆ ಮಾನ್ಯ ಮಾಡುವ ಸಂಬಂಧ ಮಹಾರಾಷ್ಟ್ರವು ಅನುಸರಿಸುವ ನೀತಿಯನ್ನೇ ಕರ್ನಾಟಕದಲ್ಲಿ ಕಡ್ಡಾಯವಾಗುವುದಿಲ್ಲ ಎಂದು ರಾಜ್ಯ ಸರ್ಕಾರದ ವಾದವನ್ನು ಹೈಕೋರ್ಟ್ ಮಾನ್ಯ ಮಾಡಿದೆ. ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ವಿದೇಶದಲ್ಲಿ ಪಡೆದ ವೈದ್ಯಕೀಯ ಪದವಿ ಮಾನ್ಯ ಮಾಡುವುದಕ್ಕಾಗಿ ಬೇರೆಯದೇ ಆದ ಮಾನದಂಡಗಳು ಇರಲಿವೆ. ಹೀಗಾಗಿ ವಿದೇಶಿ ವಿಶ್ವವಿದ್ಯಾಲಯಗಳ ವೈದ್ಯಕೀಯ ಪದವಿಯನ್ನು ಮಹಾರಾಷ್ಟ್ರ ಮಾನ್ಯ ಮಾಡಿದೆ. ಅದೊಂದೇ ಕಾರಣಕ್ಕೆ ಕರ್ನಾಟಕ ದಲ್ಲಿಯೂ ವಿದೇಶಿ ವಿವಿಗಳ ವೈದ್ಯಕೀಯ ಪದವಿಗಳನ್ನು ಮಾನ್ಯ ಮಾಡದಿರುವುದು ತಪ್ಪೆಂದು ಹೇಳಲಾಗದು ಎಂದು ನ್ಯಾಯಪೀಠ ತಿಳಿಸಿತು.
ಅರ್ಜಿದಾರರು ನ್ಯಾಯಪೀಠಕ್ಕೆ ಸಲ್ಲಿಸಿದ್ದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರು ತಾವೇ ವಿದೇಶಿ ವಿವಿಯಿಂದ ವೈದ್ಯಕೀಯ ಪದವಿ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಹಾಗಾಗಿ ಆ ಮೂಲಕ ಸಕ್ಷಮ ಪ್ರಾಧಿಕಾರ ನಿಗದಿಪಡಿಸಿದ್ದ ಅರ್ಹತೆಯ ಮಾನದಂಡವನ್ನು ಅದು ಹೊಂದಿಲ್ಲ ಎಂಬುದು ತಿಳಿಯಲಿದೆ. ಅಲ್ಲದೇ, ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವಾಗ ಅದಕ್ಕೆ ಹೊಂದುವಂತಹ ಅರ್ಹತೆಗಳನ್ನು ನಿಗದಿಪಡಿಸುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇರಲಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.