ಬೆಂಗಳೂರು : ತಂದೆಯ ಸಾಲಕ್ಕೆ ಭದ್ರತೆಯಾಗಿ ಮಗ ಚೆಕ್ ನೀಡಿದರೆ, ಆತ ಕೂಡ ಸಾಲಕ್ಕೆ ಜವಾಬ್ದಾರ ಆಗಲಿದ್ದು, ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಕಾಯಿದೆಯ ಪ್ರಕಾರ ಮಗ ಮರುಪಾವತಿ ಮಾಡಬೇಕು ಎಂದು ಹೈಕೋರ್ಟ್ ಆದೇಶ ಮಾಡಿದೆ. ದಾವಣಗೆರೆಯ ಪ್ರಸಾದ್ ರಾಯ್ಕರ್ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ಆಲಿಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.
ಅಲ್ಲದೇ, ಪ್ರಕರಣದಲ್ಲಿ ಆರೋಪಿ, ಮೃತ ವ್ಯಕ್ತಿಯ ಮಗನಾಗಿದ್ದಾರೆ. ಮೃತ ತಂದೆಯು ದೂರುದಾರರಿಂದ ಸಾಲ ಪಡೆದಿದ್ದಾರೆ ಮತ್ತು ಮರುಪಾವತಿಸಲು ಒಪ್ಪಿ ಅದಕ್ಕೆ ಖಾತ್ರಿಯನ್ನೂ ನೀಡಿದ್ದಾರೆ. ಜೊತೆಗೆ, ಮಗ ತಂದೆಯ ಕಾನೂನುಬದ್ಧ ವಾರಸುದಾರರಾಗಿದ್ದು, ಪುತ್ರ ಸಾಲದ ಹಣವನ್ನು ಮರುಪಾವತಿ ಮಾಡಲೇಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ನಿಯಮದಂತೆ ಸಾಲಕ್ಕೆ ಖಾತ್ರಿ ನೀಡಿರುವ (ಗ್ಯಾರೆಂಟರ್ ಹೇಗೆ ಬಾಧ್ಯಸ್ಥರಾಗುತ್ತಾರೋ ಅದೇ ರೀತಿಯಲ್ಲಿ ಚೆಕ್ ನೀಡಿದ ಪುತ್ರನೂ ಬಾಧ್ಯಸ್ಥನಾಗುತ್ತಾನೆ. ಹೀಗಾಗಿ ಹಣ ಮರುಪಾವತಿ ಮಾಡಬೇಕು ಎಂದು ದಾವಣಗೆರೆಯ ಜೆಎಂಎಫ್‌ಸಿ ನ್ಯಾಯಾಲಯ ನೀಡಿರುವ ಆದೇಶವನ್ನು ನ್ಯಾಯಪೀಠ ಎತ್ತಿ ಹಿಡಿದಿದೆ.
ಇದನ್ನೂ ಓದಿ:ನಮ್ಮದು ಈಸ್ಟ್ ಇಂಡಿಯಾ ಕಂಪನಿ ಆಡಳಿತ ಅಲ್ಲ: ಕಲ್ಯಾಣ ರಾಜ್ಯ ಎಂದಿರುವ ಹೈಕೋರ್ಟ್
ಆರೋಪಿಯು ತನ್ನ ತಂದೆಯ ಸಾಲವನ್ನು ಮರುಪಾವತಿಸುವುದಾಗಿ ದೂರುದಾರರ ಬಳಿ ಒಪ್ಪಿಕೊಂಡು ಆನಂತರ 10 ಸಾವಿರ ರೂ. ಮರುಪಾವತಿಯನ್ನೂ ಮಾಡಿದ್ದಾರೆ. ಬಳಿಕ ತನ್ನ ತಂದೆಯ ಸಾಲಕ್ಕೆ ತಾನು ಬಾಧ್ಯಸ್ಥನಲ್ಲ ಎಂದು ಹೇಳಿದರೆ ಅದನ್ನು ಒಪ್ಪಲಾಗದು ಎಂದು ನ್ಯಾಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.