ಬೆಂಗಳೂರು : ಕ್ರಿಮಿನಲ್ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ಕೊಡಿಸಲು ಯಾರದ್ದೋ ಜಮೀನು ಭದ್ರತೆ ನೀಡಿದ್ದಾರೆಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಹೈಕೋರ್ಟ್ ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದೆ.
ಷರತ್ತುಗಳ ಮೇರೆಗೆ ಜಾಮೀನು ಪಡೆದಿದ್ದ ಆರೋಪಿ ವಿಚಾರಣೆಗೆ ಸತತವಾಗಿ ಗೈರು ಹಾಜರಾದ ಹಿನ್ನೆಲೆಯಲ್ಲಿ ಜಾಮೀನಿಗೆ ಭದ್ರತೆ ನೀಡಿದ್ದ ವ್ಯಕ್ತಿಯ ಹೆಸರಿನಲ್ಲಿದ್ದ ಜಮೀನು ಮುಟ್ಟುಗೋಲಿಗೆ ಆದೇಶಿಸಿತ್ತು. ನ್ಯಾಯಾಲಯದ ಈ ಕ್ರಮ ಪ್ರಶ್ನಿಸಿ ನಗರದ ಗೊಟ್ಟಿಗೆರೆ ನಿವಾಸಿ ಜಿ. ಪ್ರಶಾಂತ್ ಎಂಬುವರು ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹರೀಶ್ ಕುಮಾರ್ ಅವರಿದ್ದ ಪೀಠ, ಪ್ರಕರಣ ತನಿಖೆ ನಡೆಸುವಂತೆ ನಗರದ 45ನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ಅಂಡ್ ಸೆಷನ್ಸ್ ಕೋರ್ಟ್ಗೆ ನಿರ್ದೇಶಿಸಿದೆ. ಅಲ್ಲದೇ, ಪ್ರಕರಣದ ತನಿಖೆ ಮುಗಿಯುವರೆಗೆ ಜಾಮೀನು ಭದ್ರತೆಗೆ ನೀಡಿರುವ ಮೊತ್ತವನ್ನು ವಸೂಲಿ ಮಾಡಲು ಜಮೀನು ಮುಟ್ಟುಗೋಲು ಹಾಕಿಕೊಳ್ಳದಂತೆ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ಪ್ರಕರಣವೇನು?:
ಬೆಂಗಳೂರಿನ ವಿವೇಕನಗರದಲ್ಲಿ ನಡೆದಿದ್ದ ಕ್ರಿಮಿನಲ್ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಜಬೀರ್ ಅಹ್ಮದ್ಗೆ ಜಾಮೀನು ನೀಡಲು ಜಿ.ಎಸ್ ಗುಂಡಣ್ಣ ಎಂಬುವರ ಜಾಮೀನು ಭದ್ರತೆ ನೀಡಲಾಗಿತ್ತು. ಹೀಗೆ ಜಾಮೀನು ಪಡೆದ ಆರೋಪಿ ವಿಚಾರಣೆಗೆ ಸತತ ಗೈರು ಹಾಜರಾಗಿದ್ದ. ಈ ಹಿನ್ನೆಲೆಯಲ್ಲಿ ಜಾಮೀನು ಭದ್ರತಾ ಖಾತರಿ ಮೊತ್ತ ವಸೂಲಿಗೆ ಕೋರ್ಟ್ ಆದೇಶಿಸಿತ್ತು. ಈ ವೇಳೆ ಜಮೀನಿನ ಮಾಲಿಕರಾಗಿದ್ದ ಜಿ.ಎಸ್ ಗುಂಡಣ್ಣ ಪ್ರಕರಣಕ್ಕೂ ತಮಗೂ ಸಂಬಂಧವಿಲ್ಲ ಎಂದಿದ್ದರು.
ಇದನ್ನು ಪರಿಗಣಿಸದ ಕೋರ್ಟ್ ಭದ್ರತಾ ಖಾತರಿ ಮೊತ್ತ ವಸೂಲಿಗೆ ಜಮೀನು ಮುಟ್ಟುಗೋಲು ಹಾಕಿಕೊಳ್ಳುವಂತೆ ನಿರ್ದೇಶಿಸಿತ್ತು. ಅದರಂತೆ ಬೆಂಗಳೂರು ದಕ್ಷಿಣ ತಹಶೀಲ್ದಾರ್ ಗುಂಡಣ್ಣ ಹೆಸರಲ್ಲಿದ್ದ ಬೇಗೂರು ತಾಲೂಕಿನ ಚಿಕ್ಕತಮ್ಮನಹಳ್ಳಿ ಸರ್ವೆ ನಂಬರ್ 31/2ರಲ್ಲಿನ 1.8 ಎಕರೆ ಜಮೀನನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಈ ನಡುವೆ ಗುಂಡಣ್ಣ ಮೃತಪಟ್ಟಿದ್ದರಿಂದ ಅವರ ಪುತ್ರ ಜಿ. ಪ್ರಶಾಂತ್ ಹೈಕೋರ್ಟ್ ಗೆ ಈ ಸಂಬಂಧ ತಕರಾರು ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ವೇಳೆ ಆರೋಪಿ ಜಬೀರ್ ಅಹ್ಮದ್ಗೆ ಜಾಮೀನು ನೀಡಿರುವ ವ್ಯಕ್ತಿ ಜಿ.ಎಸ್ ಗುಂಡಣ್ಣ ಫೋಟೋ ಹಾಗೂ ವಯಸ್ಸಿಗೂ ಅರ್ಜಿದಾರ ಜಿ. ಪ್ರಶಾಂತ್ ಅವರ ತಂದೆ ಜಿ.ಎಸ್ ಗುಂಡಣ್ಣ ಫೋಟೋ, ವಯಸ್ಸಿಗೂ ವ್ಯತ್ಯಾಸವಿತ್ತು. ಪ್ರಶಾಂತ ಅವರ ತಂದೆ 1946ರಲ್ಲಿ ಜನಿಸಿದ್ದರೂ, ಆರೋಪಿಗೆ ಜಾಮೀನು ನೀಡಿದ ವ್ಯಕ್ತಿ ಗುಂಡಣ್ಣ ವಯಸ್ಸು 41 ಎಂದು ದಾಖಲೆಗಳಲ್ಲಿ ಕಂಡುಬಂದಿತ್ತು.
ಈ ಸಂಗತಿಗಳನ್ನು ಪರಿಗಣಿಸಿದ ಹೈಕೋರ್ಟ್ ಪ್ರಕರಣದಲ್ಲಿ ನಕಲಿ ವ್ಯಕ್ತಿ ಜಾಮೀನು ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಅರ್ಜಿದಾರರು ವಿಚಾರಣಾ ನ್ಯಾಯಾಲಯಕ್ಕೆ ಜಮೀನು ಬಿಡುಗಡೆ ಕೋರಿ ಸೂಕ್ತ ಅರ್ಜಿ ಸಲ್ಲಿಸಬೇಕು. ಅದನ್ನು ನ್ಯಾಯಾಲಯ ಪರಿಗಣಿಸಿ ಸೂಕ್ತ ಆದೇಶ ಹೊರಡಿಸಬೇಕು. ಇನ್ನು ಅನ್ಯರ ಜಮೀನು ಭದ್ರತಾ ಖಾತರಿಯಾಗಿ ನೀಡಿರುವ ಕುರಿತು ವಿಚಾರಣೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ಇದನ್ನೂ ಓದಿ:ವಕ್ಫ್ ಆಸ್ತಿ ವಿವಾದ ಟ್ರಿಬ್ಯುನಲ್ನಲ್ಲಿ ಮಾತ್ರವೇ ವಿಚಾರಣೆ : ಹೈಕೋರ್ಟ್ ಆದೇಶ