ಬೆಂಗಳೂರು :ಪ್ರಸಕ್ತ ಶೈಕ್ಷಣಿಕ ವರ್ಷ ಹಾಗೂ ಹಿಂದಿನ ವರ್ಷದಲ್ಲಿ ಬಾಕಿ ಉಳಿದಿರುವ ಶುಲ್ಕ ಸಂಗ್ರಹಿಸಲು ಮತ್ತು ಸರ್ಕಾರದಿಂದ ಬರಬೇಕಾಗಿರುವ ಶೇ.25ರಷ್ಟು ಆರ್ಟಿಇ ಸೀಟುಗಳ ಶುಲ್ಕವನ್ನು ಪಾವತಿಸುವಂತೆ ಕೋರಿ ಕ್ಯಾಮ್ಸ್ ಸಲ್ಲಿಸಿರುವ ಮನವಿಯನ್ನು ಮೂರು ತಿಂಗಳಲ್ಲಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಆದೇಶಿಸಿದೆ.
ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್ಸ್) ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಪಿ.ಬಿ. ಭಜಂತ್ರಿ ಅವರಿದ್ದ ಪೀಠ ವಿಚಾರಣೆ ನಡೆಸಿತು. ವಿಚಾರಣೆ ಪೂರ್ಣಗೊಳಿಸಿ ಅರ್ಜಿ ವಿಲೇವಾರಿ ಮಾಡಿದ ಪೀಠ, ಅರ್ಜಿದಾರ ಸಂಸ್ಥೆ 2020ರ ಮಾರ್ಚ್ 31ರಂದು ಸಲ್ಲಿಸಿರುವ ಮನವಿಯನ್ನು ಸರ್ಕಾರ ಮುಂದಿನ ಮೂರು ತಿಂಗಳೊಳಗೆ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿತು.
ಅರ್ಜಿದಾರರ ಪರ ವಾದಿಸಿದ ವಕೀಲ ಜಿ. ಆರ್. ಮೋಹನ್, 2020-21ನೇ ಶೈಕ್ಷಣಿಕ ವರ್ಷಕ್ಕೆ ಟ್ಯೂಷನ್ ಫೀ ಸಂಗ್ರಹಕ್ಕೆ ಮತ್ತು 2019-20ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಂದ ಬರಬೇಕಾಗಿರುವ ಬಾಕಿ ಟ್ಯೂಷನ್ ಶುಲ್ಕ ಸಂಗ್ರಹಕ್ಕೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ ಸರ್ಕಾರ ಈವರೆಗೆ ಮನವಿ ಪರಿಗಣಿಸಿಲ್ಲ. ಇದರಿಂದಾಗಿ ಖಾಸಗಿ ಶಾಲೆಗಳು ತೀವ್ರ ತೊಂದರೆಗೆ ಸಿಲುಕಿವೆ ಎಂದು ವಿವರಿಸಿದರು.
ಅಲ್ಲದೇ, ಮೊದಲೇ ಖಾಸಗಿ ಶಾಲೆಗಳು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ. ಜೊತೆಗೆ, ಸರ್ಕಾರ ಶೇ.25ರಷ್ಟು ಆರ್ಟಿಇ ಸೀಟುಗಳಿಗೆ ನೀಡಬೇಕಾಗಿದ್ದ ಹಣವನ್ನು ಕಳೆದ ಎರಡು ವರ್ಷಗಳಿಂದ ಪಾವತಿಸಿಲ್ಲ. ಇದೀಗ ಕೋವಿಡ್ನಿಂದಾಗಿ ಶಾಲೆಗಳು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ಕೂಡಲೇ ಸರ್ಕಾರ ಬಾಕಿ ಇರುವ ಆರ್ಟಿಇ ಶುಲ್ಕ ಪಾವತಿಗೆ ಕ್ರಮ ಕೈಗೊಳ್ಳುವಂತೆ ಹಾಗೂ ಅರ್ಜಿದಾರರ ಸಂಸ್ಥೆ ನೀಡಿರುವ ಮನವಿಯನ್ನು ಪರಿಗಣಿಸುವಂತೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು. ಕೋರಿಕೆ ಪುರಸ್ಕರಿಸಿದ ಪೀಠ, ಸರ್ಕಾರಕ್ಕೆ ಮನವಿ ಪರಿಗಣಿಸಲು ಆದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.