ಕರ್ನಾಟಕ

karnataka

ETV Bharat / state

ಗುರು ರಾಘವೇಂದ್ರ ಬ್ಯಾಂಕ್ ಹಗರಣ: ಸಾಲ ವಸೂಲಿಗೆ ಅಡಳಿತಾಧಿಕಾರಿಗೆ ಅಧಿಕಾರ

ಗುರು ರಾಘವೇಂದ್ರ ಬ್ಯಾಂಕ್ ಅವ್ಯವಹಾರ ಪ್ರಕರಣದಲ್ಲಿ ಬ್ಯಾಂಕ್​ನ ಆಡಳಿತಾಧಿಕಾರಿ ಕೆ.ಎಸ್. ಶ್ಯಾಮ್ ಪ್ರಸಾದ್ ಅವರಿಗೆ ಸಾಲ ವಸೂಲಿ, ಠೇವಣಿಗಳ ನವೀಕರಣ ಮಾಡುವುದು ಸೇರಿದಂತೆ ಹಲವು ಕಾರ್ಯಗಳನ್ನು ನಡೆಸಲು ಅಧಿಕಾರ ನೀಡಿ ಹೈಕೋರ್ಟ್ ಆದೇಶಿಸಿದೆ.

hc
hc

By

Published : Jul 24, 2021, 5:02 PM IST

ಬೆಂಗಳೂರು:ಗುರು ರಾಘವೇಂದ್ರ ಬ್ಯಾಂಕ್ ಅವ್ಯವಹಾರ ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್, ಬ್ಯಾಂಕ್​ನ ಆಡಳಿತಾಧಿಕಾರಿ ಕೆ.ಎಸ್. ಶ್ಯಾಮ್ ಪ್ರಸಾದ್ ಅವರಿಗೆ ಸಾಲ ವಸೂಲಿ, ಠೇವಣಿಗಳ ನವೀಕರಣ ಮಾಡುವುದು ಸೇರಿದಂತೆ ಹಲವು ಕಾರ್ಯಗಳನ್ನು ನಡೆಸಲು ಅಧಿಕಾರ ನೀಡಿ ಆದೇಶಿಸಿದೆ. ಬ್ಯಾಂಕ್ ಹಗರಣದ ತನಿಖೆ ಕೋರಿ ಬಸವನಗುಡಿಯ ಕೆ.ಆರ್ ನರಸಿಂಹಮೂರ್ತಿ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯಪೀಠ ಈ ಮಧ್ಯಂತರ ಆದೇಶ ಹೊರಡಿಸಿದೆ.

ಆಡಳಿತಾಧಿಕಾರಿ ಕಾನೂನು ಪ್ರಕಾರ ಸಹಕಾರಿ ಬ್ಯಾಂಕ್​ನಿಂದ ಸಾಲ ಪಡೆದಿರುವವರಿಗೆ ನೋಟಿಸ್​ಗಳನ್ನು ಜಾರಿಗೊಳಿಸಿ ಸಾಲ ವಸೂಲಾತಿ ಪ್ರಕ್ರಿಯೆಯನ್ನು ಆರಂಭಿಸಲು, ಸಾಲ ಮರುಪಾವತಿ ಸ್ವೀಕರಿಸಲು, ಠೇವಣಿಗಳನ್ನು ನವೀಕರಿಸಲು ಅಧಿಕಾರ ನೀಡಿದೆ. ಹಾಗೆಯೇ, ಸಾಲಗಾರರಿಂದ ಸ್ವೀಕರಿಸಿದ ಹಣವನ್ನು ಸಕ್ಷಮ ಪ್ರಾಧಿಕಾರದ ಮೂಲಕ ಸಹಕಾರಿ ಬ್ಯಾಂಕ್​ನ ಖಾತೆಗೆ ಜಮೆ ಮಾಡುವಂತೆ ನಿರ್ದೇಶಿಸಿದೆ.

ಅಲ್ಲದೆ, ಸಾಲ ಮರುಪಾವತಿಗೆ ಮುಂದೆ ಬಂದಿರುವ ಸಾಲಗಾರ ಶ್ರೀಪತಿ ಹೆರಳೆ ಅವರಿಂದ ಸಾಲದ ಮೊತ್ತ ವಾಪಸ್ ಪಡೆದು, ಅವರು ಅಡವಿಟ್ಟಿರುವ ದಾಖಲೆಗಳನ್ನು ಹಿಂದಿರುಗಿಸಬೇಕು, ಅವರಿಂದ ಪಡೆದ ಹಣವನ್ನು ಸಕ್ಷಮ ಪ್ರಾಧಿಕಾರದ ಖಾತೆಗೆ ಜಮೆ ಮಾಡಬೇಕು. ನಿಶ್ಚಿತ ಠೇವಣಿದಾರರು ತಮ್ಮ ಠೇವಣಿಯ ನವೀಕರಣಕ್ಕೆ ಮನವಿ ಸಲ್ಲಿಸಿದರೆ ನವೀಕರಿಸಬೇಕು.

ಆದರೆ, ಅವರಿಂದ ಮೂಲಮೊತ್ತ ಹಾಗೂ ಬಡ್ಡಿ ಮೊತ್ತಕ್ಕೆ ಖಾತ್ರಿ ಕೇಳುವುದಿಲ್ಲವೆಂದು ಮುಚ್ಚಳಿಕೆ ಬರೆಸಿಕೊಳ್ಳಬೇಕು. 2004ರ ಕೆಪಿಐಡಿ ಕಾಯ್ದೆಯ ಪ್ರಕಾರ ವಿಶೇಷ ನ್ಯಾಯಾಲಯದ ಮೂಲಕ ಠೇವಣಿದಾರರಿಗೆ ಹಣ ಮರುಪಾವತಿ ಆಗುತ್ತದೆ ಎಂಬುದನ್ನು ಅರ್ಥೈಸಿಕೊಡಬೇಕು. ಠೇವಣಿ ನವೀಕರಣಕ್ಕೆ ಆಡಳಿತಾಗಾರರು ವೈಯಕ್ತಿಕ ಜವಾಬ್ದಾರರಾಗುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಬ್ಯಾಂಕ್​ನ ಆಡಳಿತಾಧಿಕಾರಿ ಆಡಿಟ್ ಅಥವಾ ಮರು ಆಡಿಟ್ ನಡೆಸಲು ಸ್ವತಂತ್ರರಿದ್ದಾರೆ, ಸಹಕಾರಿ ಬ್ಯಾಂಕ್ ಮತ್ತು ಸಹಕಾರ ಸೊಸೈಟಿಯ ಆಡಳಿತಗಾರರು ಕಾಲಕಾಲಕ್ಕೆ ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಅಗತ್ಯಬಿದ್ದರೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸೂಕ್ತ ನಿರ್ದೇಶನಗಳನ್ನು ಪಡೆಯಬಹುದು ಎಂದು ನ್ಯಾಯಾಲಯ ತಿಳಿಸಿ, ಮುಂದಿನ ವಿಚಾರಣೆ ಆಗಸ್ಟ್ 18ಕ್ಕೆ ಮುಂದೂಡಿದೆ.

ABOUT THE AUTHOR

...view details