ಬೆಂಗಳೂರು:2022-23ನೇ ಸಾಲಿನ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಗೆ ಹಾಜರಾದ 2020-21ನೇ ಸಾಲಿನ ಪುನರಾವರ್ತಿತ ಅಭ್ಯರ್ಥಿಗಳ ಒಟ್ಟು ಪಡೆದ ಅಂಕದಲ್ಲಿ ಸರಾಸರಿ 6 ಅಂಕಗಳನ್ನು ಕಡಿತ ಮಾಡಿ ಪಿಯುಸಿ ಮತ್ತು ಸಿಇಟಿಯ ಅಂಕಗಳಲ್ಲಿ 50:50ರಂತೆ ಪರಿಗಣಿಸಿ ಫಲಿತಾಂಶ ಪ್ರಕಟಿಸಲು ಹೈಕೋರ್ಟ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ(ಕೆಇಎ) ಸೂಚನೆ ನೀಡಿದೆ.
ಸಿಇಟಿ ಪರೀಕ್ಷೆಗೆ ಪುನರಾವರ್ತಿತರ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ಅಂಕಗಳನ್ನು ಪರಿಗಣಿಸುವಂತೆ ಏಕ ಸದಸ್ಯ ನ್ಯಾಯಪೀಠ ನೀಡಿದ್ದ ತೀರ್ಪು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯನ್ಯಾಯಮೂರ್ತಿ ಆಲೋಕ್ ಆರಾಧೆ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ಅರ್ಜಿ ಇತ್ಯರ್ಥ ಪಡಿಸಿದೆ.
2020-21ನೇ ಸಾಲಿನಲ್ಲಿ ಪಿಯುಸಿ ಮುಗಿಸಿರುವ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರದಲ್ಲಿ 6, ರಸಾಯನಶಾಸ್ತ್ರದಲ್ಲಿ 5 ಮತ್ತು ಗಣಿತಶಾಸ್ತ್ರದಲ್ಲಿ 7 ಅಂಕಗಳನ್ನು ಕಡಿತ ಮಾಡಬೇಕು. ಇದು ಒಟ್ಟು ಅಂಕಗಳಲ್ಲಿ ಸರಾಸರಿ 6 ಅಂಕಗಳು ಕಡಿಮೆ ಆಗಲಿದೆ. ಆ ಬಳಿಕ ಪಿಯುಸಿಯಲ್ಲಿ ಪಡೆದ ಅಂಕಗಳಲ್ಲಿ ಶೇ.50 ಮತ್ತು ಸಿಇಟಿಯಲ್ಲಿ ಪಡೆದ ಶೇ.50ರಂತೆ ಪರಿಗಣಿಸಿ ಫಲಿತಾಂಶ ಪ್ರಕಟಿಸಬೇಕು. ಅದರಂತೆ ಸೀಟು ಹಂಚಿಕೆ ಪ್ರಕ್ರಿಯೆ ನಡೆಸಬೇಕು ಎಂದು ಪೀಠ ಸೂಚಿಸಿದೆ.
ಅಲ್ಲದೇ, ಈ ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಐಟಿ ಸಂಬಂಧಿತ ವಿಷಯದಲ್ಲಿ ಕಳೆದ ಸಾಲಿನಲ್ಲಿದ್ದ ಸೀಟುಗಳನ್ನು ಈ ವರ್ಷ ಶೇ.10ರಷ್ಟು ಹೆಚ್ಚಳ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು. ಈ ಅಂಶವನ್ನು ಜಾರಿಗೊಳಿಸುವಂತೆ ನ್ಯಾಯಾಲಯ ಸರ್ಕಾರಕ್ಕೆ ತಿಳಿಸಿದೆ.