ಬೆಂಗಳೂರು: ಗುತ್ತಿಗೆ ಹಗರಣ ಆರೋಪ ಸಂಬಂಧ ತನಿಖಾ ಸಂಸ್ಥೆಗಳು ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಿದೆ ಎಂದು ಬಿಬಿಎಂಪಿ ಸಿವಿಲ್ ಗುತ್ತಿಗೆದಾರರಿಗೆ ಬಾಕಿ ಇರುವ ಹಣವನ್ನು ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಸಿವಿಲ್ ಗುತ್ತಿಗೆದಾರರಾದ ಮೆಸರ್ಸ್ ಓಎಂ ಎಸ್ಎಲ್ವಿ ಕನ್ಸ್ಟ್ರಕ್ಷನ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳು ಪಡೆಯುವಂತೆ ಇಲಾಖಾ ಮುಖ್ಯಸ್ಥರು ಅಥವಾ ಪಾಲಿಕೆಯ ಮುಖ್ಯಸ್ಥರು ವಿಚಾರಣಾ ನ್ಯಾಯಾಲಯದಿಂದ ದಾಖಲೆಯ ಪ್ರತಿಗಳನ್ನು ಪಡೆದುಕೊಳ್ಳಬಹುದು. ಈ ಪ್ರಕರಣದಲ್ಲಿ ಅರ್ಜಿದಾರರು ಆರೋಪಿಯಾಗಿದ್ದು, ಅವರೂ ಸಹ ದಾಖಲೆ ಕೋರಿ ಅರ್ಜಿ ಸಲ್ಲಿಸಬಹುದು. ಆ ರೀತಿ ಅರ್ಜಿ ಸಲ್ಲಿಸುವ ಬದಲು ಪಾಲಿಕೆ ಮತ್ತು ಅರ್ಜಿದಾರರಿಬ್ಬರೂ ಸಹ ಒಬ್ಬರ ಮೇಲೆ ಒಬ್ಬರು ದೋಷಿಸಿಕೊಂಡು, ಕಾಮಗಾರಿ ಬಿಲ್‌ಗಳ ಪ್ರತಿಗಳನ್ನು ಪಡೆದುಕೊಂಡಿಲ್ಲ. ಹಾಗಾಗಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಪೀಠ ಹೇಳಿದೆ.
ಅಲ್ಲದೆ, ಈ ಎಲ್ಲ ದಾಖಲೆಗಳ ಮೂಲ ವಾರಸುದಾರರು ಪಾಲಿಕೆ ಆಗಿದ್ದು, ಒಮ್ಮೆ ಕಾಮಗಾರಿ ಪೂರ್ಣಗೊಂಡರೆ ಆ ನಂತರ ಅದರ ಬಿಲ್‌ಗಳನ್ನು ಪಾವತಿಸಲು ಅಗತ್ಯ ಪ್ರಕ್ರಿಯೆಗಳನ್ನು ಪಾಲಿಕೆ ಕೈಗೊಳ್ಳಬೇಕಾಗುತ್ತದೆ. ತನ್ನ ಬಳಿ ದಾಖಲೆ ಇಲ್ಲ ಎಂದು ನೆಪ ಹೇಳಲಾಗದು. ಒಂದು ವೇಳೆ ದಾಖಲೆಯ ಪ್ರತಿ ಇಲ್ಲದಿದ್ದರೂ ಸಹ ಅದು ಸಂಬಂಧಿಸಿದ ಲೋಕಾಯುಕ್ತ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿ, ಪ್ರಮಾಣೀಕೃತ ಪ್ರತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.