ಬೆಂಗಳೂರು: ವಿಚ್ಛೇದನ ಪತ್ನಿಯ ಜೀವನ ನಿರ್ವಹಣೆ ಹಾಗೂ ಆಕೆಯ ಸುಪರ್ದಿಯಲ್ಲಿರುವ ಎರಡನೇ ಮಗನ ಉನ್ನತ ವ್ಯಾಸಂಗದ ವೆಚ್ಚ ಪರಿಗಣಿಸಿ ಪತ್ನಿಗೆ ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿದ್ದ 25 ಲಕ್ಷ ರೂ. ಶಾಶ್ವತ ಜೀವನಾಂಶ ಮೊತ್ತವನ್ನು ಹೈಕೋರ್ಟ್ 40 ಲಕ್ಷಕ್ಕೆ ಹೆಚ್ಚಿಸಿ ಆದೇಶಿಸಿದೆ. ದಕ್ಷಿಣ ಕನ್ನಡದ ವಿಚ್ಚೇದಿತ ದಂಪತಿ ಸಲ್ಲಿಸಿದ್ದ ಪ್ರತ್ಯೇಕ ಮೇಲ್ಮನವಿಗಳ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಪ್ರಕರಣದಲ್ಲಿ ಮೇಲ್ಮನವಿದಾರರ ಮೊದಲ ಮಗ ಮುಂಬೈ ಐಐಟಿಯಲ್ಲಿ ಎಂಜಿನಿಯರ್ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾಭ್ಯಾಸಕ್ಕಾಗಿ 26.50 ಲಕ್ಷ ರೂ. ವೆಚ್ಚಮಾಡಲಾಗುತ್ತಿದೆ. ಎರಡನೇ ಮಗ ಸದ್ಯ ಪತ್ನಿಯ ಸುಪರ್ದಿಯಲ್ಲಿದ್ದು, 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಆ ಮಗು ವೃತ್ತಿಪರ ಕೋರ್ಸ್ ವ್ಯಾಸಂಗ ಮಾಡಲು ಇನ್ನೂ ಮೂರು ವರ್ಷ ಅಗತ್ಯವಿದೆ. ಮೊದಲನೆ ಮಗನ ವ್ಯಾಸಂಗದ ಸಂಪೂರ್ಣ ವೆಚ್ಚದ ಜವಾಬ್ದಾರಿ ಹೊತ್ತಿರುವುದಾಗ ಎರಡನೇ ಮಗನ ವಿದ್ಯಾಭ್ಯಾಸದ ಖರ್ಚನ್ನೂ ತಂದೆಯೇ ಹೊರಬೇಕಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅಲ್ಲದೇ, ಎರಡನೇ ಮಗನ ಮುಂದಿನ ವೃತ್ತಿಪರ ಕೋರ್ಸ್ ವ್ಯಾಸಂಗ ಮತ್ತು ಪತ್ನಿಯ ಜೀವನ ನಿರ್ವಹಣೆ ಪರಿಗಣಿಸಿದಾಗ ಜೀವನಾಂಶವನ್ನು ಹೆಚ್ಚಿಸುವುದು ಸೂಕ್ತ. ಅದರಂತೆ 40 ಲಕ್ಷ ರೂ. ಜೀವನಾಂಶ ನಿಗದಿಪಡಿಸಿದರೆ, ಎರಡನೇ ಮಗನ ವೈದ್ಯಕೀಯ ಹಾಗೂ ಶೈಕ್ಷಣಿಕ ವೆಚ್ಚ ನೋಡಿಕೊಳ್ಳಬಹುದು ಎಂದು ತೀರ್ಮಾನಿಸಿದ ಹೈಕೋರ್ಟ್, ಪತ್ನಿಗೆ ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿದ ಜೀವನಾಂಶ ಮೊತ್ತವನ್ನು 40 ಲಕ್ಷ ರೂ.ಗೆ ಹೆಚ್ಚಿಸಿತು. ಆ ಪೈಕಿ ಮೂರು ತಿಂಗಳ ಒಳಗೆ 10 ಲಕ್ಷ ಮತ್ತು ಉಳಿದ 30 ಲಕ್ಷ ರೂ.ವನ್ನು ಒಂದು ವರ್ಷದ ಒಳಗೆ ಎರಡು ಕಂತಿನಲ್ಲಿ ಪತ್ನಿಗೆ ಪಾವತಿಸುವಂತೆ ಪತಿಗೆ ಆದೇಶಿಸಿದೆ.
ವಿಚಾರಣೆ ವೇಳೆ ಪತ್ನಿ ಪರ ವಕೀಲರು, ದಂಪತಿ 13 ವರ್ಷದಿಂದ ದೂರವಿದ್ದಾರೆ. ಅವರು ಮತ್ತೆ ದಂಪತಿಯಾಗಿ ಸಹ ಜೀವನ ನಡೆಸಲು ಕಷ್ಟವಿದೆ. ಪತಿಯು ಮಂಗಳೂರಿನಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಉತ್ತಮ ವರಮಾನ ಗಳಿಸುತ್ತಿದ್ದಾರೆ. ಪತಿಯನ್ನು ತೊರೆದು ಬಂದ ಕ್ಷಣದಿಂದ ಮಕ್ಕಳನ್ನು ಪತ್ನಿಯೇ ಪೋಷಿಸುತ್ತಿದ್ದಾರೆ. ಅವರಿಗೆ ಸ್ವತಂತ್ರ ಆದಾಯ ಮೂಲವಿಲ್ಲ. ಆದ್ದರಿಂದ ಶಾಶ್ವತ ಜೀವನಾಂಶ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಕೋರಿದರು. ಅಲ್ಲದೆ, ಕೌಟುಂಬಿಕ ನ್ಯಾಯಾಲಯವು 2015ರಲ್ಲಿ 25 ಲಕ್ಷ ರೂ. ಜೀವನಾಂಶ ಘೋಷಿಸಿದ್ದರೂ ಅದನ್ನು ಈವರೆಗೂ ಪತಿ ಪಾವತಿಸಿಲ್ಲ. ಸದ್ಯಜೀವನ ನಿರ್ವಹಣೆ ವೆಚ್ಚ ಹೆಚ್ಚಿರುವುದರಿಂದ ಜೀವನಾಂಶ ಏರಿಕೆ ಮಾಡಬೇಕು ಎಂದು ಪತ್ನಿ ಪರ ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿದರು.