ಕರ್ನಾಟಕ

karnataka

ETV Bharat / state

ಸಹಕಾರ ಸಂಘದ ಕೋರಂ ಕಡಿಮೆಯಾಗುವಷ್ಟು ನಿರ್ದೇಶಕರು ರಾಜೀನಾಮೆ ನೀಡಿದ್ರೆ ಚುನಾವಣೆ ಅತ್ಯಗತ್ಯ: ಹೈಕೋರ್ಟ್ - High court

ಸಕ್ಕರೆಗೊಲ್ಲಹಳ್ಳಿಯ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ವಿಶೇಷಾಧಿಕಾರಿ ನೇಮಕ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಯು ಹೈಕೋರ್ಟ್​ನಲ್ಲಿ ನಡೆಯಿತು.

high-court-order-on-agricultural-service-cooperative-society-election
ಸಹಕಾರ ಸಂಘದ ಕೋರಂ ಕಡಿಮೆಯಾಗುವಷ್ಟು ನಿರ್ದೇಶಕರು ರಾಜೀನಾಮೆ ನೀಡಿದ್ರೆ ಚುನಾವಣೆ ಅತ್ಯಗತ್ಯ: ಹೈಕೋರ್ಟ್

By ETV Bharat Karnataka Team

Published : Jan 11, 2024, 5:53 PM IST

ಬೆಂಗಳೂರು :ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮದ ಅಡಿಯಲ್ಲಿನ ಸಹಕಾರ ಸಂಘಗಳಲ್ಲಿ ಕೋರಂ ಕಡಿಮೆಯಾಗುವಷ್ಟು ಸದಸ್ಯರು ರಾಜೀನಾಮೆ ನೀಡಿದ್ದಲ್ಲಿ ಸಂಘದ ಎಲ್ಲ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಸಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.

ಸಕ್ಕರೆಗೊಲ್ಲಹಳ್ಳಿಯ ವ್ಯವಸಾಯ ಸೇವಾ ಸಹಕಾರ ಸಂಘದ ಆಡಳಿತ ನಿರ್ವಹಣೆ ಮತ್ತು ಚುನಾವಣೆ ನಡೆಸುವುದಕ್ಕಾಗಿ ವಿಶೇಷಾಧಿಕಾರಿ ನೇಮಕ ಮಾಡಿದ್ದ ಕ್ರಮ ಪ್ರಶ್ನಿಸಿ ಹೆಚ್ ಟಿ ಮುನಿಕುಮಾರ್ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಪ್ರಸ್ತುತದ ಪ್ರಕರಣದಲ್ಲಿ ಇಡೀ ಸಂಘದ ನಿರ್ದೇಶಕ ಮಂಡಳಿಗೆ ಚುನಾವಣೆ ನಡೆಸುವುದಕ್ಕಾಗಿ ಕೆಲ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ರಾಜೀನಾಮೆ ನೀಡಿದ್ದಾರೆ. ಇದರಿಂದ ಎಲ್ಲ ಸ್ಥಾನಗಳಿಗೆ ಚುನಾವಣೆ ನಡೆಸಬೇಕಾದ ಅನಿವಾರ್ಯತೆ ಬಂದಿದೆ ಎಂಬುದಾಗಿ ಅರ್ಜಿದಾರರು ವಾದಿಸಿದ್ದಾರೆ. ಆದರೆ, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ ಸೆಕ್ಷನ್ 31(1)ರ ಪ್ರಕಾರ ಸಂಘದಲ್ಲಿ ಕೋರಂಗೆ ಅಗತ್ಯವಿರುವ ಸದಸ್ಯರ ಸ್ಥಾನ ಖಾಲಿ ಇದ್ದಲ್ಲಿ ವಿಶೇಷಾಧಿಕಾರಿ ನೇಮಕ ಮಾಡುವುದಕ್ಕೆ ಸಹಕಾರ ಸಂಘಗಳ ರಿಜಿಸ್ಟ್ರಾರ್‌ಗೆ ಅಧಿಕಾರವಿರಲಿದೆ. ಸೆಕ್ಷನ್ 31(3)ರ ಪ್ರಕಾರ ಸಂಘಕ್ಕೆ ವಿಶೇಷಾಧಿಕಾರಿ ನೇಮಕ ಮಾಡಿದ ಬಳಿಕ ಎಲ್ಲ ನಿರ್ದೇಶಕರು ತಮ್ಮ ಸ್ಥಾನದಿಂದ ಬಿಡುಗಡೆಯಾಗಿದ್ದಾರೆ ಎಂಬುದಾಗಿ ಪರಿಗಣಿಸಬೇಕಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಆದ್ದರಿಂದ ಅರ್ಜಿ ವಜಾ ಮಾಡುತ್ತಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ:ಅರ್ಜಿದಾರರು ಸೇರಿದಂತೆ ರಾಜೀನಾಮೆ ನೀಡಿದ ವ್ಯಕ್ತಿಗಳು 2023ರಿಂದ 2028ರ ಅವಧಿಗೆ ಸಕ್ಕರೆಗೊಲ್ಲಹಳ್ಳಿಯ ವ್ಯವಸಾಯ ಸೇವಾ ಸಹಕಾರ ಸಂಘ ಒಟ್ಟ 12 ಸ್ಥಾನಗಳಿಗೆ ನಿರ್ದೇಶಕರಾಗಿ 2023ರ ಜುಲೈ 26ರಂದು ನಡೆದಿದ್ದ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. 2023ರ ಸೆಪ್ಟಂಬರ್ 1ರಂದು ನಡೆದ ಸಭೆಗೆ 12 ಮಂದಿ ನಿರ್ದೇಶಕರು ಹಾಜರಾಗಿದ್ದರು. ಮೊದಲನೇ ಅರ್ಜಿದಾರರಾದ ಹೆಚ್ ಟಿ ಮುನಿಕುಮಾರ್ ಅಧ್ಯಕ್ಷರಾಗಿ ಮತ್ತು ಎರಡನೇ ಅರ್ಜಿದಾರ ಎ. ವಿಕಾಸ್​ ಎಂಬುವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಚುನಾವಣೆ ಬಳಿಕ ಸಂಘದ ನಿರ್ದೇಶಕರಲ್ಲಿ 6 ಮಂದಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಸರ್ಕಾರ ಸಂಘಕ್ಕೆ 2023ರ ಸೆಪ್ಟಂಬರ್ 19ರಂದು ಸಹಕಾರ ಸಂಘಗಳ ರಿಜಿಸ್ಟ್ರಾರ್ ಅವರು ವಿಶೇಷಾಧಿಕಾರಿಯನ್ನು ನೇಮಕ ಮಾಡಿ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ರಾಜೀನಾಮೆ ನೀಡಿದ ನಿರ್ದೇಶಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ, ರಾಜೀನಾಮೆ ನೀಡಿದ ನಿರ್ದೇಶಕರ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಸಬೇಕು ಎಂದು ಇನ್ನುಳಿದ ಸ್ಥಾನಗಳನ್ನು ಮುಂದುವರೆಸಬೇಕು ಎಂದು ಕೋರಿದ್ದರು. ಇದಕ್ಕೆ ಸರ್ಕಾರದ ಪರವಾಗಿ ವಕೀಲರಾದ ಸಿದ್ದಾರ್ಥ ಬಾಬುರಾವ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ಪುರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯ ಭೂಮಿ ಪರಿವರ್ತನೆ ಅಗತ್ಯವಿಲ್ಲ; ಹೈಕೋರ್ಟ್ ಸ್ಪಷ್ಟನೆ

ABOUT THE AUTHOR

...view details