ಕರ್ನಾಟಕ

karnataka

ETV Bharat / state

ಪುರಸಭೆ ಮತ್ತು ನಗರಸಭೆ ವ್ಯಾಪ್ತಿಯ ಜಾಹೀರಾತು ಹೋರ್ಡಿಂಗ್ಸ್‌ಗೆ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್ - ಈಟಿವಿ ಭಾರತ ಕರ್ನಾಟಕ

ಪುರಸಭೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಅಳವಡಿಸಲಾಗುವ ಜಾಹೀರಾತು ಹೋರ್ಡಿಂಗ್ಸ್‌ಗಳಿಗೆ ತೆರಿಗೆ ವಿಧಿಸುವಂತಿಲ್ಲ- ಸಂಗ್ರಹಿಸಿರುವ ತೆರಿಗೆ ಹಣವನ್ನು ಮರಳಿಸಬೇಕು-ಸರ್ಕಾರಕ್ಕೆ ಹೈಕೋರ್ಟ್ ಆದೇಶ.

High Court of karnataka
ಪುರಸಭೆ ಮತ್ತು ನಗರಸಭೆ ವ್ಯಾಪ್ತಿಯ ಜಾಹೀರಾತು ಹೋರ್ಡಿಂಗ್ಸ್‌ಗಳಿಗೆ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್

By

Published : Dec 24, 2022, 6:40 PM IST

ಬೆಂಗಳೂರು: ಪುರಸಭೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಅಳವಡಿಸಲಾಗುವ ಜಾಹೀರಾತು ಹೋರ್ಡಿಂಗ್ಸ್‌ಗಳಿಗೆ ತೆರಿಗೆ ವಿಧಿಸುವಂತಿಲ್ಲ. ಈ ಸಂಬಂಧ ಈಗಾಗಲೇ ಸಂಗ್ರಹಿಸಿರುವ ತೆರಿಗೆ ಹಣವನ್ನು ಮರಳಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ಆದೇಶ ಮಾಡಿದೆ.

ಜಾಹೀರಾತು ತೆರಿಗೆಗೆ ಸಂಬಂಧಿಸಿದಂತೆ ನಗರ ಸ್ಥಳೀಯ ಸಂಸ್ಥೆಗಳು ಹೊರಡಿಸಿದ್ದ ಎರಡು ನೋಟಿಸ್‌ಗಳನ್ನು ಪ್ರಶ್ನಿಸಿ ದಾವಣಗೆರೆಯ ರಹೀಲ್ ಕಮ್ಯುನಿಕೇಷನ್ಸ್, ಬೆಂಗಳೂರಿನ ಔಟ್ಡೋರ್ ಅಡ್ವರ್ಟೈಸಿಂಗ್ ಅಸೋಸಿಯೇಶನ್ ಸೇರಿದಂತೆ ಮತ್ತಿತರರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ.

ಜಾಹೀರಾತು ತೆರಿಗೆಗೆ ಸಂಬಂಧಿಸಿದಂತೆ ಕಾನೂನು ರೂಪಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ:2016ರಲ್ಲಿ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಜಾರಿಗೊಳಿಸಲು ಸಂವಿಧಾನಕ್ಕೆ 101ನೇ ತಿದ್ದುಪಡಿಯನ್ನು ಸಂಸತ್ ಮಾಡಿರುವುದರಿಂದ ಸಂವಿಧಾನದ 8ನೇ ಷೆಡ್ಯೂಲ್​ನ ಎರಡನೇ ಪಟ್ಟಿಯಲ್ಲಿನ ಎಂಟ್ರಿ ನಂ.55 ಅನ್ನು ಕೈಬಿಡಲಾಗಿದೆ. ಹೀಗಾಗಿ, ಜಾಹೀರಾತು ತೆರಿಗೆಗೆ ಸಂಬಂಧಿಸಿದಂತೆ ಕಾನೂನು ರೂಪಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪುರಸಭೆ ಮತ್ತು ನಗರಸಭೆಗಳಿಗೆ ಜಾಹೀರಾತು ತೆರಿಗೆ ವಿಧಿಸಲು ಮತ್ತು ಸಂಗ್ರಹಿಸಲು ಅಧಿಕಾರವಿಲ್ಲ:ಅಲ್ಲದೆ, ಸಂವಿಧಾನದ ಏಳನೇ ಷೆಡ್ಯೂಲ್​ನ್ನು ಎರಡನೇ ಪಟ್ಟಿಯ (ರಾಜ್ಯ ಪಟ್ಟಿ), ಎಂಟ್ರಿ 55ರ ಅನ್ನು ಕೈಬಿಟ್ಟಿರುವುದರಿಂದ ಪುರಸಭೆ ಮತ್ತು ನಗರಸಭೆಗಳಿಗೆ ಜಾಹೀರಾತು ತೆರಿಗೆ ವಿಧಿಸಲು ಮತ್ತು ಅದನ್ನು ಸಂಗ್ರಹಿಸಲು ಅಧಿಕಾರವಿಲ್ಲ ಎಂದು ತಿಳಿಸಿದೆ. ಜಾಹೀರಾತುಗಳಿಗೆ ತೆರಿಗೆ ವಿಧಿಸಲು ಅಧಿಕಾರ ಕಲ್ಪಿಸಿದ್ದ ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ಕೆಲ ಸೆಕ್ಷನ್‌ಗಳನ್ನು ಅಸಾಂವಿಧಾನಿಕ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಜತೆಗೆ, ಅರ್ಜಿದಾರರು ಅಳವಡಿಸುವ ಹೋರ್ಡಿಂಗ್ಸ್‌ಗಳಿಗೆ ಪ್ರತಿವಾದಿಗಳು ತೆರಿಗೆ ಪಾವತಿಸುವಂತೆ ಬೇಡಿಕೆ ಇಡುವಂತಿಲ್ಲ. ಪುರಸಭೆ ಅಥವಾ ನಗರಸಭೆ ವ್ಯಾಪ್ತಿಯಲ್ಲಿ ಅರ್ಜಿದಾರರು ಹೋರ್ಡಿಂಗ್ಸ್ ಅಳವಡಿಕೆ ಮಾಡಿದರೆ ಯಾವುದೇ ಕ್ರಮ ಕೈಗೊಳ್ಳುವಂತಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಪುರಸಭೆ ಮತ್ತು ನಗರಸಭೆಗಳು ವಸೂಲಿ ಮಾಡಿದ ಹಣವನ್ನು ಹಿಂದಿರುಗಿಸಬೇಕು:ಸಂವಿಧಾನಕ್ಕೆ 101ನೇ ತಿದ್ದುಪಡಿ ಮಾಡಿದ ನಂತರ ಅರ್ಜಿದಾರರಿಂದ ಸಂಗ್ರಹಿಸಿರುವ ಜಾಹೀರಾತು ತೆರಿಗೆ ಹಣ ವಾಪಸ್ ಪಡೆಯುವುದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಮನವಿ ಸಲ್ಲಿಸಬಹುದು. ಪುರಸಭೆ ಮತ್ತು ನಗರಸಭೆಗಳು ವಸೂಲಿ ಮಾಡಿದ ಹಣವನ್ನು ಹಿಂದಿರುಗಿಸಬೇಕು ಎಂದು ಆದೇಶದಲ್ಲಿ ಹೈಕೋರ್ಟ್​ ತಿಳಿಸಿದೆ.

ಇದನ್ನೂ ಓದಿ:ಮತದಾರರ ಮಾಹಿತಿ ಕಳವು ಆರೋಪ ಪ್ರಕರಣ: ಅಮಾನತುಗೊಂಡಿದ್ದ ಐಎಎಸ್ ಅಧಿಕಾರಿಗಳು ಮರು ನೇಮಕ

ABOUT THE AUTHOR

...view details