ಬೆಂಗಳೂರು:ಅಪಘಾತದಿಂದ ಶೇ.65ರಷ್ಟು ಅಂಗವೈಕಲ್ಯಕ್ಕೆ ಗುರಿಯಾದ ಇಂಜಿನಿಯರ್ ಪದವೀಧರನಿಗೆ 11 ಲಕ್ಷ ರೂ. ಪರಿಹಾರ ಪಾವತಿಸಲು ಮೋಟಾರು ವಾಹನ ನ್ಯಾಯಾಧೀಕರಣ ಹೊರಡಿಸಿದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ವಿಮಾ ಕಂಪನಿಗೆ 44 ಲಕ್ಷ ರೂ. ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.
ರಸ್ತೆ ಅಪಘಾತ ಪ್ರಕರಣದಲ್ಲಿ ಸಂತ್ರಸ್ತರಿಗೆ ಮೋಟಾರು ವಾಹನ ನ್ಯಾಯಾಧೀಕರಣ ನಿಗದಿಪಡಿಸಿದ ಪರಿಹಾರ ಮೊತ್ತವನ್ನು ಪ್ರಶ್ನಿಸಿ ವಿಮಾ ಕಂಪನಿ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಪ್ರಕರಣದಲ್ಲಿ ಸಂತ್ರಸ್ತರಾದ ಲೋಬೊ ಶೇ.65ರಷ್ಟು ಶಾಶ್ವತ ಅಂಗವೈಕಲ್ಯಕ್ಕೆ ಗುರಿಯಾಗಿದ್ದಾರೆ. ಚಿಕಿತ್ಸೆಗೆ ಐದು ಲಕ್ಷಕ್ಕೂ ಹೆಚ್ಚು ಹಣ ವ್ಯಯಿಸಿದ್ದಾರೆ. ಅಪಘಾತಕ್ಕೂ ಮುನ್ನ ಇಂಜಿನಿಯರ್ ಪದವೀಧರನಾದ ಲೋಬೋ ಅಬುದಾಬಿಯಲ್ಲಿ ಉದ್ಯೋಗ ಮಾಡುತ್ತಾ ಮಾಸಿಕ 50 ಸಾವಿರ ರೂ.ಗಿಂತ ಅಧಿಕ ವೇತನ ಪಡೆಯುತ್ತಿದ್ದರು. ಅಪಘಾತ ನಡೆದಾಗ 26 ವರ್ಷವಾಗಿತ್ತು. ಹಾಗಾಗಿ, ಪರಿಹಾರ ಮೊತ್ತ ಹೆಚ್ಚಿಸುವುದು ಸೂಕ್ತ ಎಂದು ಹೈಕೋರ್ಟ್ ತೀರ್ಮಾನಿಸಿತು.
ಪರಿಹಾರ ಮೊತ್ತವನ್ನು 44,92,140 ರೂಗೆ ಹೆಚ್ಚಿಸಿದ ಹೈಕೋರ್ಟ್, ಆ ಮೊತ್ತಕ್ಕೆ ಅಪಘಾತ ನಡೆದ ದಿನದಿಂದ ಅನ್ವಯವಾಗುವಂತೆ ವಾರ್ಷಿಕ ಶೇ.6ರಷ್ಟು ಬಡ್ಡಿ ನೀಡುವಂತೆ ವಿಮಾ ಕಂಪನಿಗೆ ಆದೇಶಿಸಿದೆ.