ಕರ್ನಾಟಕ

karnataka

ETV Bharat / state

ಕರ್ನಾಟಕ ಪಶು ವೈದ್ಯಕೀಯ ವಿವಿಯ ಬೋಧಕೇತರ ಸಿಬ್ಬಂದಿ ಖಾಯಂಗೊಳಿಸಲು ಹೈಕೋರ್ಟ್ ಆದೇಶ - ಕರ್ನಾಟಕ ಪಶು ವೈದ್ಯಕೀಯ ವಿವಿಯ ಬೋಧಕೇತರ ಸಿಬ್ಬಂದಿ ಕಾಯಂಗೊಳಿಸಲು ಹೈಕೋರ್ಟ್ ಆದೇಶ

ನಾಗೇಂದ್ರ ಹಾಗೂ ಇತರೆ 12 ಮಂದಿ ಸಿಬ್ಬಂದಿ ಮತ್ತೆ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಏಕ ಸದಸ್ಯ ಪೀಠ ಆ ಅರ್ಜಿಗಳನ್ನು ಪುರಸ್ಕರಿಸಿ ವಿಶ್ವವಿದ್ಯಾಲಯದ ಹಿಂಬರಹವನ್ನು ರದ್ದುಪಡಿಸಿತ್ತು. ಇದರಿಂದ ವಿಶ್ವ ವಿದ್ಯಾಲಯ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ವಜಾಗೊಳಿಸಿರುವ ವಿಭಾಗೀಯ ಪೀಠ, ವಿಶ್ವವಿದ್ಯಾಲಯದ ಹಿಂಬರಹವನ್ನು ರದ್ದುಪಡಿಸಿದೆ..

ಹೈಕೋರ್ಟ್
ಹೈಕೋರ್ಟ್

By

Published : Jan 22, 2022, 5:24 PM IST

ಬೆಂಗಳೂರು :ಹತ್ತು ವರ್ಷಕ್ಕಿಂತ ಹೆಚ್ಚು ಅವಧಿ ಸೇವೆ ಸಲ್ಲಿಸಿದ 13 ಬೋಧಕೇತರ ಸಿಬ್ಬಂದಿಯ ಸೇವೆ ಖಾಯಂಗೊಳಿಸಲು ನಿರಾಕರಿಸಿ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ನೀಡಿದ್ದ ಹಿಂಬರಹವನ್ನು ರದ್ದುಪಡಿಸಿದ ಹೈಕೋರ್ಟ್ ಏಕ ಸದಸ್ಯಪೀಠದ ಆದೇಶ ಎತ್ತಿ ಹಿಡಿದಿರುವ ವಿಭಾಗೀಯ ಪೀಠ, ಸಿಬ್ಬಂದಿಯ ಸೇವೆ ಖಾಯಂಗೊಳಿಸುವ ಮನವಿ ಪರಿಗಣಿಸುವಂತೆ ವಿಶ್ವವಿದ್ಯಾಲಯಕ್ಕೆ ಸೂಚಿಸಿದೆ.

ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಹಿರಿಯ ನ್ಯಾಯಮೂರ್ತಿ ಎಸ್.ಸುಜಾತ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಸುಗಮ ಕಾರ್ಯನಿರ್ವಹಣೆಗೆ ಅನುಕೂಲವಾಗಲೆಂದು ಎಸ್.ಜಿ ನಾಗೇಂದ್ರ ಸೇರಿ 13 ಸಿಬ್ಬಂದಿಯನ್ನು ತಾತ್ಕಾಲಿಕ ಆಧಾರದ ಮೇಲೆ ವಿಶ್ವವಿದ್ಯಾಲಯ ನೇಮಿಸಿತ್ತು. ಈ ಸಿಬ್ಬಂದಿ 10 ವರ್ಷಕ್ಕೂ ಹೆಚ್ಚು ಕಾಲ ದುಡಿಸಿಕೊಂಡಿದೆ.

ಇದೀಗ ಅವರ ಸೇವೆ ಖಾಯಂಗೊಳಿಸಲು ಮಾತ್ರ ನಿರಾಕರಿಸಿದೆ. ಇದು ಸಮರ್ಥನೀಯವಲ್ಲ. ಹಾಗಾಗಿ, ಈ 13 ಮಂದಿ ಸಿಬ್ಬಂದಿಯ ಪ್ರಕರಣಗಳನ್ನು ಉಮಾದೇವಿ ಪ್ರಕರಣದಲ್ಲಿ ಹೈಕೋರ್ಟ್ ಸಾಂವಿಧಾನಿಕ ಪೀಠ ನೀಡಿರುವ ತೀರ್ಪಿನ್ವಯ ಪರಿಗಣಿಸಬೇಕು ಎಂದು ವಿಭಾಗೀಯ ಪೀಠ ಆದೇಶದಲ್ಲಿ ಸೂಚಿಸಿದೆ.

ಪ್ರಕರಣದ ಹಿನ್ನೆಲೆ

ಎಸ್.ಜಿ ನಾಗೇಂದ್ರ, ಎಸ್.ಆರ್ ಧನಂಜಯ ಮತ್ತು ಕೆ.ಕೆ ವಿಮಲಾ ಸೇರಿದಂತೆ ಒಟ್ಟು 13 ಜನರು ವಿಶ್ವವಿದ್ಯಾಲಯದಲ್ಲಿ 2004ರಿಂದ 2009ರವರೆಗೆ ಸಹಾಯಕ, ಪ್ರಯೋಗಾಲಯ ಸಹಾಯಕ ಹಾಗೂ ಇನ್ನಿತರ ಹುದ್ದೆಗಳಿಗೆ ತಾತ್ಕಾಲಿಕ ಆಧಾರದ ಮೇಲೆ ನೇಮಕಗೊಂಡಿದ್ದರು. ಅವರು ನಿರ್ವಹಿಸುತ್ತಿರುವ ಹುದ್ದೆಗಳ ಖಾಯಂ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ 2015ರ ಜು.7ರಂದು ವಿಶ್ವವಿದ್ಯಾಲಯ ಅಧಿಸೂಚನೆ ಹೊರಡಿಸಿತ್ತು.

ಈ ಅಧಿಸೂಚನೆ ಪ್ರಶ್ನಿಸಿ ಎಸ್.ಜಿ ನಾಗೇಂದ್ರ ಸೇರಿ 13 ಜನ ಸಿಬ್ಬಂದಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು 2019ರಲ್ಲಿ ಇತ್ಯರ್ಥಪಡಿಸಿದ್ದ ಏಕ ಸದಸ್ಯ ಪೀಠ, ತಮ್ಮ ಸೇವೆ ಖಾಯಂಗೊಳಿಸಲು ಕೋರಿ ಅರ್ಜಿದಾರರು ವಿಶ್ವವಿದ್ಯಾಲಯಕ್ಕೆ ಹೊಸದಾಗಿ ಮನವಿ ಪತ್ರ ಸಲ್ಲಿಸಬಹುದು ಎಂದು ಸೂಚಿಸಿತ್ತು. ಅದರಂತೆ 2019ರ ಜೂ.26ರಂದು ನಾಗೇಂದ್ರ ಮತ್ತಿರರರು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ವಿಶ್ವವಿದ್ಯಾಲಯ, ಸೇವೆ ಖಾಯಂಗೊಳಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹಿಂಬರಹ ನೀಡಿತ್ತು.

ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಇದನ್ನು ಪ್ರಶ್ನಿಸಿ ನಾಗೇಂದ್ರ ಹಾಗೂ ಇತರೆ 12 ಮಂದಿ ಸಿಬ್ಬಂದಿ ಮತ್ತೆ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಏಕ ಸದಸ್ಯ ಪೀಠ ಆ ಅರ್ಜಿಗಳನ್ನು ಪುರಸ್ಕರಿಸಿ ವಿಶ್ವವಿದ್ಯಾಲಯದ ಹಿಂಬರಹವನ್ನು ರದ್ದುಪಡಿಸಿತ್ತು. ಇದರಿಂದ ವಿಶ್ವ ವಿದ್ಯಾಲಯ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ವಜಾಗೊಳಿಸಿರುವ ವಿಭಾಗೀಯ ಪೀಠ, ವಿಶ್ವವಿದ್ಯಾಲಯದ ಹಿಂಬರಹವನ್ನು ರದ್ದುಪಡಿಸಿದೆ.

For All Latest Updates

TAGGED:

ABOUT THE AUTHOR

...view details