ಬೆಂಗಳೂರು: ಉದ್ಯಾನವನ, ಸ್ಮಶಾನ, ಆಟದ ಮೈದಾನ ಸೇರಿದಂತೆ ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಜಾಗವನ್ನು ಐದು ವರ್ಷದಲ್ಲಿ ಸರ್ಕಾರ ಸ್ವಾಧೀನ ಪಡಿಸಿಕೊಂಡು ಅಭಿವೃದ್ಧಿ ಮಾಡದಿದ್ದಲ್ಲಿ ಕರ್ನಾಟಕ ನಗರ ಮತ್ತು ಪಟ್ಟಣ ಯೋಜನೆ ಸೆಕ್ಷನ್ 12(1)(ಸಿ) ಅನ್ವಯ ಆ ಜಾಗ ರದ್ದಾಗಲಿದೆ ಎಂದು ಹೈಕೋರ್ಟ್ ಆದೇಶ ನೀಡಿದೆ. ಬೆಂಗಳೂರಿನ ಜಯಮಹಲ್ ಮುಖ್ಯ ರಸ್ತೆಯಲ್ಲಿರುವ ಜಯಮಹಲ್ ಪ್ಯಾಲೇಸ್ ಹೋಟೆಲ್ ಮಾಲೀಕರಾದ ಹೆಚ್.ಹೆಚ್. ಜೋತೇಂದ್ರ ಸಿನ್ಹಾಜಿ ಮತ್ತು ಅವರ ಉತ್ತರಾಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.
ಅರ್ಜಿದಾರರ ಭೂಮಿಯನ್ನು ಪರಿಷ್ಕೃತ ಕ್ರಿಯಾ ಯೋಜನೆಯಡಿ 2007ರ ಜೂ.25ರಂದು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟು ಆದೇಶ ಹೊರಡಿಸಲಾಗಿದೆ. ಆ ಅವಧಿ 2012ರ ಜೂ.24ಕ್ಕೆ ಕೊನೆಗೊಂಡಿದೆ ಮತ್ತು ಆ ಭೂಮಿಯನ್ನು 5 ವರ್ಷದಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಹಾಗಾಗಿ ಭೂ ಮಾಲೀಕರು ತಮ್ಮ ಭೂಮಿಯನ್ನು ಮರು ನಿಯೋಜಿಸಲು (ರಿ-ಡೆಸಿಗ್ನೇಟ್) ಮಾಡಲು ಮನವಿ ಮಾಡಬಹುದಾಗಿದೆ ಎಂದು ನ್ಯಾಯಪೀಠ ಆದೇಶಿಸಿದೆ.
ಅಲ್ಲದೆ, ನ್ಯಾಯಾಲಯ ಅರ್ಜಿದಾರರ ಭೂಮಿಯ ಸುತ್ತಮುತ್ತಲ ಪ್ರದೇಶಗಳ ಅಭಿವೃದ್ಧಿಯನ್ನು ಆಧರಿಸಿ ತಮ್ಮ ಭೂಮಿಯನ್ನು ಮರು ನಿಯೋಜಿಸುವ ಬಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಕಾರಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಬಹುದು, ಪ್ರಾಧಿಕಾರ 180 ದಿನಗಳಲ್ಲಿ ಆ ಮನವಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ. ಮಾಸ್ಟರ್ ಪ್ಲಾನ್ ಗಳಲ್ಲಿ ಈಗಾಗಲೇ ಆಗಿರುವ ಅಭಿವೃದ್ಧಿಗಳನ್ನು ಮತ್ತು ಉದ್ದೇಶಿರುವ ಅಭಿವೃದ್ಧಿ ಯೋಜನೆ ಎರಡನ್ನೂ ಸಹ ಒಳಗೊಂಡಿರಬೇಕು. ಈಗಾಗಲೇ ಆಗಿರುವ ಅಭಿವೃದ್ಧಿಗಳನ್ನು ಬದಲಾಯಸಲಾಗದು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.