ಬೆಂಗಳೂರು: ಒಂದು ದಿನದ ಮಟ್ಟಿಗೆ ಡಿಸೆಂಬರ್ 31 ರಂದು ಮಾಲ್ ಮುಚ್ಚಲಾಗುವುದು ಎಂದು ಮಾಲ್ ಆಫ್ ಏಷ್ಯಾದ ಪರ ವಕೀಲರ ಭರವಸೆ ದಾಖಲಿಸಿಕೊಂಡ ಹೈಕೋರ್ಟ್, ಮುಂದಿನ ವಿಚಾರಣೆವರೆಗೂ ಮಾಲ್ ವಿರುದ್ಧ ಕ್ರಮಕ್ಕೆ ಮುಂದಾಗದಂತೆ ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಿದೆ. 2023ರ ಡಿಸೆಂಬರ್ 31 ಮತ್ತು 2024ರ ಜನವರಿ 15 ರ ನಡುವೆ ಮಾಲ್‌ಗೆ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಿ ಎಂದು ನಗರ ಪೊಲೀಸ್ ಆಯುಕ್ತರು ಹೊರಡಿಸಿದ ಆದೇಶ ಪ್ರಶ್ನಿಸಿ ಫೀನಿಕ್ಸ್ ಮಾಲ್ ಆಫ್ ಏಷ್ಯಾ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜೆ.ಎಸ್. ಕಮಲ್ ಅವರಿದ್ದ ವಿಶೇಷ ಪೀಠಕ್ಕೆ ಮಾಲ್ ಪರ ವಕೀಲರು ಮಾಹಿತಿ ನೀಡಿದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮಾಲ್ ಆಡಳಿತವು ಮಾಲ್ ಒಂದು ದಿನದ ಮಟ್ಟಿಗೆ ಮುಚ್ಚುಲಾಗುವುದು. ಜೊತೆಗೆ, ಪೊಲೀಸ್ ಆಯುಕ್ತರ ಆದೇಶದಲ್ಲಿ ತಿಳಿಸಿರುವ ಸಮಸ್ಯೆಗಳಿಗೆ ಸೌಹಾರ್ದಯುತವಾಗಿ ಚರ್ಚೆ ನಡೆಸಿ ಪರಿಹಾರ ಕಂಡುಕೊಂಡಕೊಳ್ಳಲಾಗುವುದು ಎಂದು ಮಾಲ್ ಪರ ವಕೀಲರು ಭರವಸೆ ನೀಡಿದರು. ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಮುಂದೂಡಿತು. ಅಲ್ಲದೆ, ಸೌಹಾರ್ದಯುತವಾಗಿ ಪರಿಹರಿಸುವವರೆಗೆ ಅಥವಾ ನ್ಯಾಯಾಲಯದಿಂದ ಮುಂದಿನ ಆದೇಶವನ್ನು ನೀಡುವವರೆಗೆ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ಪೀಠ ತಿಳಿಸಿದೆ.
ಮಾಲ್ ಆಫ್ ಏಷ್ಯಾಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸುವುದನ್ನು ಅರ್ಜಿದಾರರು ವ್ಯವಹಾರ ನಡೆಸುವುದನ್ನು ಸಂಪೂರ್ಣವಾಗಿ ತಡೆಯುವ ಆದೇಶವಾಗಿದೆ ಎನ್ನಲಾಗುವುದಿಲ್ಲ. ಅರ್ಜಿದಾರರು ಮತ್ತು ಪ್ರತಿವಾದಿ ಪೊಲೀಸ್ ಆಯುಕ್ತರ ನಡುವಿನ ಚರ್ಚೆಯ ವಿಷಯವಾಗಿದೆ. ಇದು ಕೇವಲ ಆದೇಶದಿಂದ ಅನುಷ್ಠಾನ ಮಾಡುವಂತದ್ದಲ್ಲ ಎಂದು ಪೀಠ ತಿಳಿಸಿತು.
ಪ್ರಕರಣದ ಹಿನ್ನೆಲೆ ಏನು?ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಬಳ್ಳಾರಿ ರಸ್ತೆಯ ಬ್ಯಾಟರಾಯನಪುರದಲ್ಲಿ ಮಾಲ್ ಆಫ್ ಏಷ್ಯಾ ಅಕ್ಟೋಬರ್ 22, 2023 ರಂದು ತೆರೆಯಲಾಗಿದೆ. ಪಾರ್ಕಿಂಗ್ ಸೌಲಭ್ಯಗಳು, ಟ್ರಾಫಿಕ್ ನಿಯಂತ್ರಣ ಮತ್ತು ಇತರ ಸೌಲಭ್ಯಗಳ ಬಗ್ಗೆ ಮಾಲ್ ಆಡಳಿತವು ತೆಗೆದುಕೊಂಡ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಕೋರಿ ಪೊಲೀಸರು ಅಕ್ಟೋಬರ್ 11, 2023 ರಂದು ನೋಟಿಸ್ ನೀಡಿದ್ದರು. ಇದಕ್ಕೆ ಅಕ್ಟೋಬರ್ 20 ರಂದು ಪ್ರತಿಕ್ರಿಯಿಸಿದ್ದ ಮಾಲ್ ಆಡಳಿತ ಮಂಡಳಿ, ಅಗತ್ಯ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿತ್ತು. ಇದಾದ ಬಳಿಕ ಮಾಲ್‌ಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸುವ ಆದೇಶವನ್ನು ಡಿಸೆಂಬರ್ 30 ರಂದು ಹೊರಡಿಸಲಾಗಿತ್ತು.
ವಾಹನ ದಟ್ಟಣೆ, ಸಂಚಾರ ಅಸ್ತವ್ಯಸ್ತವಾಗುವ ಹಿನ್ನೆಲೆಯಲ್ಲಿ 2023 ಡಿಸೆಂಬರ್ 31 ರಿಂದ 2024ರ ಜನವರಿ 15ರ ವರೆಗೆ ಮಾಲ್‌ಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸುವಂತೆ ನಿರ್ದೇಶಿಸಲಾಗಿತ್ತು. ಅಲ್ಲದೆ, ಮಾಲ್ ಮಂದೆ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 144 ರ ಅಡಿಯಲ್ಲಿ (ನಿಷೇಧಾಜ್ಙೆ) ಜಾರಿ ಮಾಡಿ ಪೊಲೀಸ್ ಕಮಿಷನರ್ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಮಾಲ್ ಆಡಳಿತ ಮಂಡಳಿ ಹೈಕೋರ್ಟ್ ಮೆಟ್ಟಿಲೇರಿತ್ತು.
ಅರ್ಜಿದಾರರು ನ್ಯಾಯಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದು, ತುರ್ತು ಮನವಿಯನ್ನು ಪರಿಗಣಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ನ್ಯಾಯಪೀಠ ತಿಳಿಸಿತು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮಾಲ್‌ಗೆ ನಿಷೇಧಾಜ್ಞೆ ಹೊರಡಿಸಿರುವ ಕ್ರಮ ಸರಿಯಲ್ಲ. ಸಮಸ್ಯೆ ಅಷ್ಟು ಗಂಭೀರವಾಗಿಲ್ಲ, ನಿಷೇಧಾಜ್ಞೆ ಕ್ರಮದ ಅಗತ್ಯವಿಲ್ಲ ಎಂದು ವಾದಿಸಿದ್ದರು. ಸರ್ಕಾರದ ಪರ ವಕೀಲರು, ಭಾನುವಾರ (ಇಂದು) ಮಧ್ಯಾಹ್ನ 3 ಗಂಟೆಗೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿ ಅದರ ತೀರ್ಮಾನವನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು: 15 ದಿನ 'ಮಾಲ್ ಆಫ್ ಏಷ್ಯಾ' ಬಂದ್, ನಿಷೇಧಾಜ್ಞೆ