ಬೆಂಗಳೂರು :ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಂಜೂರಾಗಿದ್ದ ಭೂಮಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಪ್ರಕಾರ ಕೃಷಿ ಹೊರತುಪಡಿಸಿ ಇತರೆ ಉದ್ದೇಶಗಳಿಗೆ ಪರಿವರ್ತನೆಗೊಂಡಿದ್ದರೆ ಅದನ್ನು ಮಾರಾಟ ಮಾಡಲು ಜಿಲ್ಲಾಧಿಕಾರಿಯಿಂದ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬೆಂಗಳೂರು ಉತ್ತರ ತಾಲೂಕಿನ ಜಾಲ ಹೋಬಳಿಯ ಮೀನುಕುಂಟೆ ಗ್ರಾಮದ ಮುನ್ನಯ್ಯ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾ. ಅಲೋಕ್ ಆರಾಧೆ, ನ್ಯಾ. ಸಚಿನ್ ಶಂಕರ್ ಮಗದಂ ಮತ್ತು ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ತ್ರಿಸದಸ್ಯಪೀಠ ಈ ಮಹತ್ವದ ತೀರ್ಪು ನೀಡಿದೆ. ಪೀಠ ತನ್ನ ತೀರ್ಪಿನಲ್ಲಿ, ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 95ರ ಅಡಿ ಭೂಮಿ ಪರಿವರ್ತನೆ ಅಗಿದ್ದರೆ, ಅಂತಹ ಸಂದರ್ಭದಲ್ಲಿ ಭೂಮಿಯನ್ನು ಮಾರಾಟ ಮಾಡಲು ಅಥವಾ ಬೇರೆಯವರಿಗೆ ವರ್ಗಾವಣೆ ಮಾಡಲು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ಕೆಲವು ಭೂಮಿ ವರ್ಗಾವಣೆ ನಿಷೇಧ) ಕಾಯಿದೆ 1978ರ ಸೆಕ್ಷನ್ 4 (2)ರ ಪ್ರಕಾರ ರಾಜ್ಯ ಸರ್ಕಾರದ ಪೂರ್ವಾನುಮತಿ ಅಗತ್ಯವಿಲ್ಲ ಎಂದಿದೆ.
ಅಲ್ಲದೇ, ಎಸ್ಸಿ ಎಸ್ಟಿ ಸಮುದಾಯಕ್ಕೆ ಮಂಜೂರಾದ ಭೂಮಿಯನ್ನು ಒಮ್ಮೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಅಡಿ ಕೃಷಿಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಿದರೆ ಅದು ಸಹಜವಾಗಿಯೇ ಮಂಜೂರಾದ ಭೂಮಿ ಎನ್ನುವ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳಲಿದೆ. ಪರಿವರ್ತನೆಯಾದ ಭೂಮಿಯು ‘ಮಂಜೂರಾದ ಭೂಮಿ’ ಎಂಬ ಅರ್ಥವನ್ನು ಕಳೆದುಕೊಂಡಿರುತ್ತದೆ. ಪೂರ್ವಾನುಮತಿ ಬೇಕಿರುವುದು ಕೇವಲ ಮಂಜೂರಾದ ಭೂಮಿಗೆ ಮಾತ್ರ ಎಂದು ಪೀಠ ಆದೇಶಿಸಿದೆ.