ಬೆಂಗಳೂರು:ರಾಜಧಾನಿಯ ರಾಜಕಾಲುವೆಗಳ ಒತ್ತುವರಿ ಸಂಬಂಧ ಮಹಾಲೇಖಪಾಲಕರು(ಸಿಎಜಿ) ನೀಡಿರುವ ಸಲಹೆಗಳನ್ನು ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸೆ. 20ರಂದು ಮೂವರು ಹಿರಿಯ ಅಧಿಕಾರಿಗಳ ಸಮಿತಿ ರಚನೆ ಮಾಡಬೇಕು ಎಂದು ಹೈಕೋರ್ಟ್ ಬಿಬಿಎಂಪಿಗೆ ಸೂಚನೆ ನೀಡಿದೆ.
ರಸ್ತೆಗುಂಡಿಗಳ ಮುಚ್ಚದ ಬಿಬಿಎಂಪಿ ಕ್ರಮ ಪ್ರಶ್ನಿಸಿ ವಿಜಯನ್ ಮೆನೆನ್ ಸೇರಿದಂತೆ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯನ್ಯಾಯಮೂರ್ತಿ ಆಲೋಕ್ ಅರಾಧೆ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿದೆ.
ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ರಾಜಕಾಲುವೆ ಒತ್ತುವರಿ ಸಂಬಂಧ ಸಿಎಜಿ ನೀಡಿರುವ ಸಲಹೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದ್ದರು. ವರದಿ ದಾಖಲಿಸಿಕೊಂಡ ನ್ಯಾಯಪೀಠ, ಸಲಹೆಗಳ ಅನುಷ್ಠಾನ ಸಂಬಂಧ ಅಧಿಕಾರಿಗಳ ಸಮಿತಿ ರಚನೆ ಮಾಡಬೇಕು ಮತ್ತು ಸಮಿತಿ ಅನುಷ್ಠಾನgಒಳಿಸುವ ಎಲ್ಲ ಮಾಹಿತಿಯನ್ನು 15 ದಿನಕ್ಕೊಮ್ಮೆ ನ್ಯಾಯಪೀಠಕ್ಕೆ ಸಲ್ಲಿಸಬೇಕು ಎಂದು ಸೂಚಿಸಿದೆ.
ಇದೇ ವೇಳೆ ಪಾಲಿಕೆ ಪರ ವಕೀಲರು, ಬಿಬಿಎಂಪಿ ವ್ಯಾಪ್ತಿಯಲ್ಲಿನ ರಾಜಕಾಲುವೆಗಳಲ್ಲಿ 2,626 ಒತ್ತುವರಿಗಳಾಗಿವೆ. ಈವರೆಗೂ 2,024 ಒತ್ತುವರಿಗಳನ್ನು ತೆರವು ಮಾಡಲಾಗಿದೆ, ಇನ್ನುಳಿದ 602 ಒತ್ತುವರಿಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು.
ರಸ್ತೆ ಗುಂಡಿ ಮುಚ್ಚುವುದು:ಬೆಂಗಳೂರು ನಗರದ ಪ್ರಮುಖ ರಸ್ತೆಗಳಲ್ಲಿ 2,010 ರಸ್ತೆ ಗುಂಡಿಗಳನ್ನು ಗುರುತಿಸಿಸಲಾಗಿದೆ. ಈಗಾಗಲೇ ಎಲ್ಲ ಗುಂಡಿಗಳನ್ನು ಹಂತ ಹಂತವಾಗಿ ಮುಚ್ಚಲಾಗುತ್ತಿದೆ. ಇನ್ನು, 221 ಗುಂಡಿಗಳನ್ನು ಮುಚ್ಚಬೇಕಾಗಿದೆ. ಅವುಗಳನ್ನು ಮುಂದಿನ ಹತ್ತು ದಿನದಲ್ಲಿ ಮುಚ್ಚಲಾಗುವುದು ಎಂದು ಬಿಬಿಎಂಪಿ ಪರ ವಕೀಲರು ಹೈಕೋರ್ಟ್ಗೆ ತಿಳಿಸಿದರು.