ಕರ್ನಾಟಕ

karnataka

ETV Bharat / state

ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷರ ಚುನಾವಣೆಗೆ ತಡೆ : ಮಧ್ಯಪ್ರವೇಶಿಸಲು ನಿರಾಕರಿಸಿದ ಹೈಕೋರ್ಟ್ - ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ

ಮೇಲ್ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ. ಮಧ್ಯಂತರ ಆದೇಶ ತೆರವುಗೊಳಿಸುವಂತೆ ಕೋರಿ ಏಕಸದಸ್ಯ ಪೀಠದ ಮುಂದೆ ಮನವಿ ಸಲ್ಲಿಸಲು ಬಿಸಿಐ ಮುಕ್ತವಾಗಿದೆ. ಒಂದು ವಾರದೊಳಗೆ ಏಕಸದಸ್ಯ ಪೀಠದ ಮುಂದೆ ಮನವಿಯನ್ನು ಸಲ್ಲಿಸಿದರೆ ನ್ಯಾಯಾಲಯ ಕಾನೂನು ಪ್ರಕಾರ ಪರಿಗಣಿಸಬೇಕು ಎಂದು ನಿರ್ದೇಶಿಸಿ ಹೈಕೋರ್ಟ್‌ ಅರ್ಜಿ ಇತ್ಯರ್ಥಪಡಿಸಿತು.

ಹೈಕೋರ್ಟ್‌
ಹೈಕೋರ್ಟ್‌

By

Published : Dec 4, 2021, 7:03 PM IST

ಬೆಂಗಳೂರು: ಭಾರತೀಯ ವಕೀಲರ ಪರಿಷತ್ತಿನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯಕಾರಿ ಸದಸ್ಯರ ಆಯ್ಕೆಗೆ ಇಂದು ನಡೆಯಬೇಕಿದ್ದ ಚುನಾವಣೆಗೆ ತಡೆ ನೀಡಿದ್ದ ಏಕಸದಸ್ಯ ಪೀಠದ ಆದೇಶದಲ್ಲಿ ಮಧ್ಯಪ್ರವೇಶಿಸಲು ಹೈಕೋರ್ಟ್‌ ವಿಭಾಗೀಯ ಪೀಠ ನಿರಾಕರಿಸಿದೆ.

ಚುನಾವಣೆಗೆ ನವೆಂಬರ್ 25 ರಂದು ತಡೆ ನೀಡಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಬಿಸಿಐ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದಮ್ ಅವರಿದ್ದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ಪೀಠ, ಮೇಲ್ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ. ಮಧ್ಯಂತರ ಆದೇಶ ತೆರವುಗೊಳಿಸುವಂತೆ ಕೋರಿ ಏಕಸದಸ್ಯ ಪೀಠದ ಮುಂದೆ ಮನವಿ ಸಲ್ಲಿಸಲು ಬಿಸಿಐ ಮುಕ್ತವಾಗಿದೆ. ಒಂದು ವಾರದೊಳಗೆ ಏಕಸದಸ್ಯ ಪೀಠದ ಮುಂದೆ ಮನವಿಯನ್ನು ಸಲ್ಲಿಸಿದರೆ ನ್ಯಾಯಾಲಯ ಕಾನೂನು ಪ್ರಕಾರ ಪರಿಗಣಿಸಬೇಕು ಎಂದು ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.

ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಬಿಸಿಐ ಪರ ವಕೀಲರು ವಾದಿಸಿ, ವಾಸ್ತವಿಕ ಅಂಶಗಳನ್ನು ಮರೆಮಾಚಿ ಅರ್ಜಿದಾರರು ಮಧ್ಯಂತರ ತಡೆಯಾಜ್ಞೆ ಪಡೆದಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನಿಮ್ಮ ಬಳಿಕ ದಾಖಲೆಗಳಿದ್ದರೆ ಅದನ್ನು ಏಕಸದಸ್ಯ ಪೀಠದ ಮುಂದೆ ಮಂಡಿಸಿ ಮಧ್ಯಂತರ ಆದೇಶ ತೆರವು ಮಾಡಲು ಕೋರಿ ಎಂದು ಸಲಹೆ ನೀಡಿತು.

ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಜಯಕುಮಾರ್‌ ಎಸ್‌ ಪಾಟೀಲ್, ಮುಂದಿನ ವರ್ಷದ ಏಪ್ರಿಲ್‌ಗೆ 17ಕ್ಕೆ ಬಿಸಿಐ ಹಾಲಿ ಪದಾಧಿಕಾರಿಗಳ ಅವಧಿ ಮುಗಿಯಲಿದೆ. ನಾಲ್ಕು ತಿಂಗಳಲ್ಲಿ ಪದಾಧಿಕಾರಿಗಳ ಅವಧಿ ಮುಗಿಯುವಾಗ ಚುನಾವಣೆ ನಡೆಸುವ ಅಗತ್ಯವಿಲ್ಲ. ಯಾವಾಗ ಚುನಾವಣೆ ನಡೆಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ನಿಯಮಗಳು ಸ್ಪಷ್ಟವಾಗಿ ಏನನ್ನೂ ಹೇಳುವುದಿಲ್ಲ. ಅವಧಿ ಮುಗಿಯುವುದಕ್ಕೂ ಮುನ್ನ ಚುನಾವಣೆ ನಡೆಸದಿರುವ ನಿಯಮ ಪಾಲನೆಗೆ ವಿರುದ್ಧವಾಗಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ನಿಯಮಾನುಸಾರ ಸದಸ್ಯರಿಗೆ ನೋಟಿಸ್‌ ನೀಡದೇ ಚುನಾವಣಾ ಸಭೆ ನಡೆಸಲಾಗಿದೆ ಎಂದು ಆಕ್ಷೇಪಿಸಿದರು.

ಭಾರತೀಯ ವಕೀಲರ ಪರಿಷತ್ತು ಡಿಸೆಂಬರ್ 4ರಂದು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಹುದ್ದೆಗಳಿಗೆ ಚುನಾವಣೆ ನಡೆಸಲು ನವೆಂಬರ್ 19 ರಂದು ಸಭೆ ನಡೆಸಿ ನಿರ್ಣಯ ಕೈಗೊಂಡಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಬಿಸಿಐ ಸದಸ್ಯರಾದ ವಕೀಲ ವೈ.ಆರ್ ಸದಾಶಿವರೆಡ್ಡಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಚುನಾವಣೆಗೆ ತಡೆ ನೀಡಿತ್ತು.

ABOUT THE AUTHOR

...view details