ಕರ್ನಾಟಕ

karnataka

ETV Bharat / state

ಮಗು ಪತಿಗೊಪ್ಪಿಸದ ಪತ್ನಿ ನಡೆಗೆ ಹೈಕೋರ್ಟ್ ತೀವ್ರ ಅಸಮಾಧಾನ: 24 ಗಂಟೆಯೊಳಗೆ ಕ್ರಮಕ್ಕೆ ಪೊಲೀಸರಿಗೆ ಆದೇಶ - wife who did not hand over the child to husband

ಕೌಟುಂಬಿಕ ಕಲಹದಲ್ಲಿ ಮಗುವನ್ನು ತನ್ನ ಸುಪರ್ದಿಗೆ ನೀಡುವಂತೆ ನ್ಯಾಯಾಲಯದ ಆದೇಶ ಪಾಲಿಸದ ಪತ್ನಿಯ ವಿರುದ್ಧ ಪತಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್ ಅರಾಧೆ ಹಾಗೂ ನ್ಯಾಯಮೂರ್ತಿ ಅನಂತ್ ರಾಮನಾಥ ಹೆಗಡೆ ಅವರಿದ್ದ ಪೀಠ ಮಹತ್ವದ ಆದೇಶ ನೀಡಿತು.

high court
ಹೈಕೋರ್ಟ್

By

Published : Jun 8, 2023, 9:29 PM IST

ಬೆಂಗಳೂರು: ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅಪ್ರಾಪ್ತ ಮಗಳನ್ನು ಪತಿಯ ಸುಪರ್ದಿಗೆ ಒಪ್ಪಿಸದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಮಹಿಳೆಯ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮುಂದಿನ 24 ಗಂಟೆಯೊಳಗೆ ಮಗು ತಂದೆಯ ಸುಪರ್ದಿಯಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿದೆ. ಮಗುವನ್ನು ತಮ್ಮ ಸುಪರ್ದಿಗೆ ನೀಡುವಂತೆ ನ್ಯಾಯಾಲಯ ಹೊರಡಿಸಿದ್ದ ಆದೇಶ ಪಾಲಿಸದ ಪತ್ನಿಯ ವಿರುದ್ಧ ಪತಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಲೋಕ್ ಅರಾಧೆ ಹಾಗೂ ನ್ಯಾ. ಅನಂತ್ ರಾಮನಾಥ ಹೆಗಡೆ ಅವರಿದ್ದ ಪೀಠ ಈ ಆದೇಶ ಹೊರಹಾಕಿದೆ.

ಪತ್ನಿ ಉದ್ಯೋಗ ಮಾಡುತ್ತಿರುವ ಸಂಸ್ಥೆಯನ್ನು ಸಂಪರ್ಕಿಸಿ ಆಕೆಗೆ ಪಾವತಿಸಬಹುದಾದ ಎಲ್ಲ ಸೌಲಭ್ಯಗಳನ್ನು, ಮಗುವನ್ನು ಪತಿಯ ಸುಪರ್ದಿಗೆ ಒಪ್ಪಿಸುವವರೆಗೆ ತಡೆಹಿಡಿಯಲು ಕೋರುವಂತೆಯೂ ಪೊಲೀಸರಿಗೆ ನಿರ್ದೇಶಿಸಿರುವ ಹೈಕೋರ್ಟ್, ನ್ಯಾಯಾಲಯದ ಆದೇಶ ಪಾಲನೆ ಮಾಡದ ಮಹಿಳೆಯ ವಿರುದ್ಧ ಸ್ವಯಂಪ್ರೇರಿತ ಕ್ರಿಮಿನಲ್ ಹಾಗೂ ಸಿವಿಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆಯನ್ನೂ ಜಾರಿಗೊಳಿಸಿದೆ.

ಅಲ್ಲದೇ ಅರ್ಜಿದಾರರನ್ನು ಮಗುವಿನ ಪೋಷಕರಾಗಿ ನೇಮಿಸಿ 2022ರ ಮಾ.3ರಂದು ಕೌಟುಂಬಿಕ ನ್ಯಾಯಾಲಯ ಆದೇಶಿಸಿದೆ. ಈ ಆದೇಶವನ್ನು 2023 ರ ಜ.31ರಂದು ಎತ್ತಿಹಿಡಿದಿರುವ ಹೈಕೋರ್ಟ್ ವಿಭಾಗೀಯ ಪೀಠ, ಮಗುವಿನ ವಾರ್ಷಿಕ ಪರೀಕ್ಷೆಗಳು ಮುಗಿದ ತಕ್ಷಣ ತಂದೆಯ ಸುಪರ್ದಿಗೆ ಒಪ್ಪಿಸುವಂತೆ ಪತ್ನಿಗೆ ತಾಕೀತು ಮಾಡಿದೆ. ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಸಹ 2023ರ ಮಾ.29ರಂದು ಎತ್ತಿಹಿಡಿದಿದೆ. ಮಾ.13ರಂದು ಮಗುವಿನ ವಾರ್ಷಿಕ ಪರೀಕ್ಷೆಗಳು ಮುಗಿದಿವೆ. ಹೀಗಿದ್ದರೂ, ಮಗು ಪತ್ನಿಯ ಸುಪರ್ದಿಯಲ್ಲೇ ಇದೆ. ಇದಕ್ಕೆ ಅನುಮತಿಸಲಾಗದು ಎಂದು ನ್ಯಾಯಪೀಠ ಹೇಳಿತು.

ನ್ಯಾಯಾಲಯದ ಆದೇಶವನ್ನೂ ಪಾಲಿಸದೆ, ನ್ಯಾಯಾಲಯಕ್ಕೂ ಹಾಜರಾಗದ ಹಿನ್ನೆಲೆಯಲ್ಲಿ 2023ರ ಏ.19ರಂದು ಪತ್ನಿಗೆ ಜಾಮೀನುರಹಿತ ವಾರಂಟ್ (ಎನ್‌ಬಿಡಬ್ಲ್ಯು) ಜಾರಿಗೊಳಿಸಿತು. ಅದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಪತ್ನಿ, ಮಗಳೊಂದಿಗೆ ಹೈಕೋರ್ಟ್ ಮುಂದೆ ಹಾಜರಾಗುವುದಾಗಿ ಭರವಸೆ ನೀಡಿದ್ದರು. ಅದನ್ನು ಪರಿಗಣಿಸಿ ಆಕೆಯ ವಿರುದ್ಧ ಬಲವಂತದ ಕ್ರಮ ಜರುಗಿಸದಂತೆ ಸುಪ್ರೀಂಕೋರ್ಟ್ ಮೇ 16 ರಂದು ಆದೇಶಿಸಿತ್ತು. ಇಷ್ಟಾದರೂ, ಮಗುವನ್ನು ತಂದೆಯ ಸುಪರ್ದಿಗೆ ವಹಿಸಿಲ್ಲ. ಇದು ಮಗುವನ್ನು ತಂದೆಯ ಸುಪರ್ದಿಗೆ ನೀಡುವಂತೆ ನ್ಯಾಯಾಲಯ ನೀಡಿದ್ದ ತೀರ್ಪುಗಳ ಉಲ್ಲಂಘನೆಯಾಗಲಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ ಹೀಗಿದೆ..:ಅರ್ಜಿದಾರರು ಮತ್ತವರ ಪತ್ನಿ ನಡುವೆ ಕೌಟುಂಬಿಕ ಕಲಹವಿದ್ದು, ಪತ್ನಿ ಬಳಿಯಿರುವ ಮಗನನ್ನು ತಮ್ಮ ಸುಪರ್ದಿಗೆ ಒಪ್ಪಿಸಲು ನಿರ್ದೇಶಿಸುವಂತೆ ಕೋರಿ ಅರ್ಜಿದಾರರು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ್ದ ನ್ಯಾಯಾಲಯ, 1 ತಿಂಗಳ ಒಳಗೆ ಮಗುವನ್ನು ಪತಿಯ ಸುಪರ್ದಿಗೆ ಒಪ್ಪಿಸುವಂತೆ 2022ರ ಮಾ.3ರಂದು ಪತ್ನಿಗೆ ನಿರ್ದೇಶಿಸಿತ್ತು. ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಕೋರಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ನಡೆಸಿದ್ದ ಹೈಕೋರ್ಟ್, ಪತ್ನಿಗೆ ಬೇರೊಬ್ಬರ ಜತೆ ಅಕ್ರಮ ಸಂಬಂಧವಿರುವ ವಿಚಾರವನ್ನು ಮನಗಂಡಿತ್ತು. ಮಗುವನ್ನು ವಶಕ್ಕೆ ಪಡೆದಿದ್ದ ಪತ್ನಿ ತನ್ನ ಗಂಡನ ಮನೆ ತೊರೆದ ಬಳಿಕ ಅಕ್ರಮ ಸಂಬಂಧದಲ್ಲಿದ್ದು, ಪ್ರಿಯಕರನೊಂದಿಗೆ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದಾರೆ. ಮಗುವಿನ ಯೋಗಕ್ಷೇಮಕ್ಕಿಂತ ಆಕೆ ಅಕ್ರಮ ಸಂಬಂಧಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ್ದಾರೆ. ಮಗುವಿನ ಹಿತಾಸಕ್ತಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ಆಕೆ ಪತಿಯ ವಿರುದ್ಧ ಪ್ರತೀಕಾರಕ್ಕಾಗಿ ಮಗುವನ್ನು ಕಿತ್ತುಕೊಂಡಿದ್ದರೆ ಎಂದು ಅಭಿಪ್ರಾಯಪಟ್ಟಿತ್ತು. ಕೌಟುಂಬಿಕ ನ್ಯಾಯಾಲಯದ ಆದೇಶ ಎತ್ತಿಹಿಡಿದು, ಪತ್ನಿಯ ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್, ಮಗುವನ್ನು ಪತಿಯ ವಶಕ್ಕೆ ನೀಡುವಂತೆ ಆದೇಶಿಸಿತ್ತು. ಆದರೆ, ಈ ಆದೇಶವನ್ನು ಪತ್ನಿ ಪಾಲನೆ ಮಾಡಿಲ್ಲ ಎಂದು ಆರೋಪಿಸಿ ಏ.11ರಂದು ಪತಿ ಹೈಕೋಟ್‌ಗೆ ಹೇಬಿಯಸ್ ಕಾರ್ಪಸ್​ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ:Mysore crime: ಕೆಲಸ ಇಲ್ಲದವನೆಂದು ಬೈದು ಬುದ್ಧಿವಾದ ಹೇಳಿದ್ದ ಅಜ್ಜಿಯನ್ನು ಕೊಂದು ಸುಟ್ಟುಹಾಕಿದ್ದ ಮೊಮ್ಮಗ: ಆರೋಪಿ ಬಂಧನ

ABOUT THE AUTHOR

...view details