ಬೆಂಗಳೂರು:ಶಾಲೆಗಳನ್ನು ವ್ಯವಹಾರ ಕೇಂದ್ರವನ್ನಾಗಿಸಲು ಸಾಧ್ಯವಿಲ್ಲ. ಅಗ್ನಿ ಸುರಕ್ಷತಾ ಪ್ರಮಾಣ ಪತ್ರ ಪಡೆಯದೇ ಶಾಲೆ ನಡೆಸುವ ಮೂಲಕ ಸಣ್ಣ ಮಕ್ಕಳ ಜೀವದ ಜತೆ ಆಟವಾಡಲು ಅವಕಾಶ ನೀಡಲಾಗದು ಎಂದು ಖಾಸಗಿ ಶಾಲೆಯನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತು.
ಅಲ್ಲದೇ ಈ ರೀತಿಯ ಬೆಳವಣಿಗೆಯಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವಂತೆ ಮಾಡುವುದನ್ನು ಸಹಿಸುವುದಿಲ್ಲ ಎಂದು ಖಾಸಗಿ ಶಾಲೆಯ ಆಡಳಿತ ಮಂಡಳಿಯ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ಹೊರಹಾಕಿತು. ಮಂಡ್ಯ ಜಿಲ್ಲೆ ಆದಿ ಶಕ್ತಿ ಸೇವಾ ಟ್ರಸ್ಟ್ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು. ಇಂತಹ ಶಾಲೆಗೆ ಯಾವುದೇ ಸಾರ್ವಜನಿಕರು ತಮ್ಮ ಮಕ್ಕಳನ್ನು ಕಳುಹಿಸುವುದಕ್ಕೆ ಮುಂದಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿತು.
ಶಾಲಾ ಕಟ್ಟಡವಿದ್ದರೂ ಮಕ್ಕಳಿಗೆ ಸರಿಯಾದ ಕೊಠಡಿ ವ್ಯವಸ್ಥೆ ಇಲ್ಲ. ಕ್ರೀಡಾಂಗಣ, ಗ್ರಂಥಾಲಯ, ಪ್ರಯೋಗಾಲಯ ಹಾಗೂ ಕಾಂಪೌಂಡ್ ಸಹ ಇಲ್ಲ. ಹೀಗಿರುವಾಗಿ ಶಾಲೆ ನಡೆಸುವುದಕ್ಕೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಹೈಕೋರ್ಟ್, ಇದೇ ಕಾರಣದಿಂದ ಶಾಲೆಯನ್ನು ಮೇಲ್ದರ್ಜೆಗೇರಿಸಲು ಅವಕಾಶ ನೀಡಿಲ್ಲ. ಸರ್ಕಾರದ ಪ್ರಾಧಿಕಾರಗಳ ಕ್ರಮದಲ್ಲಿ ಯಾವುದೇ ದುರುದ್ದೇಶ ಅಡಗಿಲ್ಲ ಎಂದಿತು.