ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸೆ.13ರ ಅಂತ್ಯದ ವೇಳೆಗೆ ಆಕ್ಷೇಪಣೆ ಸಲ್ಲಿಸಿಲು ಹೈಕೋರ್ಟ್ ಸೂಚನೆ ನೀಡಿದೆ. ವರುಣಾ ಹೋಬಳಿಯ ಕೂಡನಹಳ್ಳಿ ಗ್ರಾಮದ ಕೆ.ಎಂ. ಶಂಕರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಸೆ.13ಕ್ಕೆ ಮುಂದೂಡಿದೆ.
ವಿಚಾರಣಾ ವೇಳೆ, ಪ್ರಕರಣ ಕುರಿತು ದಾಖಲೆಗಳನ್ನು ಪರಿಶೀಲನೆ ನಡೆಸಿದ ನ್ಯಾಯಪೀಠ, ಪ್ರತಿವಾದಿಗಳಿಗೆ ಆ.14ರಂದೇ ಸಮನ್ಸ್ ಜಾರಿಯಾಗಿರುವ ಹಿನ್ನೆಲೆಯಲ್ಲಿ ನಿಯಮದಂತೆ ಪ್ರತಿವಾದಿಗಳಿಗೆ ಲಿಖಿತ ಹೇಳಿಕೆ ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಬೇಕು. ಇದಕ್ಕಾಗಿ 30 ದಿನ ಕಾಲಾವಕಾಶ ನೀಡಬೇಕು. ಹಾಗಾಗಿ ಪ್ರಕರಣದ ವಿಚಾರಣೆಯನ್ನು ಸೆ. 13ಕ್ಕೆ ಮುಂದೂಡಲಾಗುವುದು. ಅಷ್ಟರಲ್ಲಿ ಪ್ರತಿವಾದಿಗಳು ಲಿಖಿತ ಹೇಳಿಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿತು. ಕಳೆದ ಜು.28ರಂದು ನ್ಯಾಯಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿತ್ತು.
ಅರ್ಜಿದಾರರು, ಕಾಂಗ್ರೆಸ್ ವತಿಯಿಂದ ಗ್ಯಾರಂಟಿ ಕಾರ್ಡ್ ಯೋಜನೆಗಳ ಮೂಲಕ ಮತದಾರರಿಗೆ ಆಮಿಷ ಒಡ್ಡಲಾಗಿದೆ. ಇದು ಲಂಚಕ್ಕೆ ಸಮವಾಗಿದ್ದು, ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 123(1) ಪ್ರಕಾರ ಮತ್ತು ಸೆಕ್ಷನ್ 123(2) ಪ್ರಕಾರ ಮತದಾರರ ಮೇಲೆ ಪ್ರಭಾವ ಬೀರುವ ಯತ್ನವಾಗಿದೆ. ಸೆಕ್ಷನ್ 123(4)ರ ಪ್ರಕಾರ ಆಮಿಷವೊಡ್ಡಿ ಪ್ರಚಾರ ಮಾಡುವುದೂ ಅಪರಾಧವಾಗಿದೆ. ಹಾಗಾಗಿ, ಅಕ್ರಮ ಎಸಗುವ ಮೂಲಕ ವರುಣಾ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಶಾಸಕರಾಗಿ ಆಯ್ಕೆಯಾಗಿದ್ದು, ಅವರನ್ನು ಅಸಿಂಧುಗೊಳಿಸಬೇಕು ಎಂದು ಕೋರಿದ್ದರು.
ಕಾಂಗ್ರೆಸ್ ಪಕ್ಷ ಮತ್ತು ಅಭ್ಯರ್ಥಿ ಸಿದ್ದರಾಮಯ್ಯ ಪ್ರಕಟಿಸಿದ ಗ್ಯಾರಂಟಿ ಯೋಜನೆಗಳು ಕೊಡುಗೆ ಹಾಗೂ ಭರವಸೆ ಸ್ವರೂಪದ್ದಾಗಿವೆ. ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯ ಅವರ ಸಮ್ಮತಿಯೊಂದಿಗೆ ಪ್ರಕಟಿಸಲಾಗಿದೆ. ಅವು ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತಹಾಕಲು ಮತದಾರರನ್ನು ಪ್ರೇರೇಪಿಸಿದೆ. ಆ ಮೂಲಕ ಸಿದ್ದರಾಮಯ್ಯ ಚುನಾವಣೆಯಲ್ಲಿ ಅಕ್ರಮಗಳನ್ನು ಎಸಗಿದ್ದಾರೆ. ಮತದಾರರಿಗೆ ಆಮಿಷವೊಡುವುದು ಲಂಚ ಮತ್ತು ಭ್ರಷ್ಟಚಾರಕ್ಕೆ ಸಮನವಾಗಿದೆ. ಅಲ್ಲದೆ, ಪ್ರಜಾಪ್ರತಿನಿಧಿ ಕಾಯಿದೆಯ ಅನ್ವಯ ಅಪರಾಧವಾಗಿದ್ದು, ಚುನಾವಣಾ ಮಾದರಿ ನೀತಿ ಸಂಹಿತೆ ಸ್ಪಷ್ಟ ಉಲ್ಲಂಘನೆಯೂ ಆಗಿದೆ ಎಂದು ಅರ್ಜಿದಾರರು ಕೋರಿದ್ದರು.
ಇದನ್ನೂ ಓದಿ:ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ: ಹೈಕೋರ್ಟ್ ಆದೇಶ