ಬೆಂಗಳೂರು : ಕೇಂದ್ರದ 'ಸಾಂಕ್ರಾಮಿಕ ಕಾಯಿಲೆ ಕಾಯ್ದೆ-1897'ರ ಕೆಲವು ಸೆಕ್ಷನ್‍ಗಳು ಹಾಗೂ 'ಕರ್ನಾಟಕ ಸಾಂಕ್ರಾಮಿಕ ಕಾಯಿಲೆ (ಕೋವಿಡ್-19 ನಿಯಂತ್ರಣ)-2020' ನಿಯಮಗಳನ್ನು ಪ್ರಶ್ನಿಸಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು ಈ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಯಾಗಿದೆ.
ಕಾಯ್ದೆಯ ನಿಯಮಗಳು ಅತ್ಯಂತ ಹಳೆಯವಾಗಿದ್ದು, ಸಂವಿಧಾನದತ್ತವಾದ ಕೆಲ ನಾಗರಿಕ ಹಕ್ಕುಗಳಿಗೆ ವಿರುದ್ಧವಾಗಿವೆ ಎಂದು ಆಕ್ಷೇಪಿಸಿ ವಕೀಲೆ ತಾರ್ಜನಿ ದೇಸಾಯಿ ಎಂಬುವರು ಸಲ್ಲಿಸಿದ್ದಾರೆ.
ಪಿಐಎಲ್ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ವಿಭಾಗೀಯ ಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಇಲಾಖೆ ನಿರ್ದೇಶಕ ಹಾಗೂ ಕೇಂದ್ರ ಕಾನೂನು ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಿ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ. ಅಲ್ಲದೇ ಅರ್ಜಿದಾರರು 'ಸಾಂಕ್ರಾಮಿಕ ಕಾಯಿಲೆ ಕಾಯ್ದೆ-1897'ರ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿರುವುದರಿಂದ ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ಗೂ ನೋಟಿಸ್ ಜಾರಿ ಮಾಡಲು ಆದೇಶಿಸಿದೆ.
ಅರ್ಜಿದಾರರ ಆರೋಪ: ಸಾಂಕ್ರಾಮಿಕ ಕಾಯಿಲೆ ಕಾಯ್ದೆ-1897 ಇದು ಬ್ರಿಟಿಷ್ ಆಡಳಿತ ವ್ಯವಸ್ಥೆ ಇದ್ದಂತಹ ಕಾಲದಲ್ಲಿ ರಚಿಸಲಾಗಿದೆ. 123 ವರ್ಷದ ಹಿಂದೆ ಮುಂಬೈ ಪ್ರಾಂತ್ಯದಲ್ಲಿ ಮಹಾಮಾರಿ ಪ್ಲೇಗ್ ಕಾಯಿಲೆ ತಡೆಗಟ್ಟಲು ಈ ಕಾಯ್ದೆ ಜಾರಿಗೆ ತರಲಾಗಿತ್ತು. ಮೊದಲು ಕಾಯ್ದೆ ಜಾರಿಗೆ ತಂದವರೇ ಆನಂತರ ಅದನ್ನು ಕರಾಳ ಕಾಯ್ದೆ ಎಂದು ಕರೆದಿದ್ದರು. ಈಗ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಿಯಮಗಳು ಅವೇ ಮಾದರಿಯಲ್ಲಿವೆ.
ಕೇಂದ್ರ ಸರ್ಕಾರದ ನೂರು ವರ್ಷ ಹಳೆಯ ಕಾಯ್ದೆಯ ಅನೇಕ ಸೆಕ್ಷನ್‍ಗಳು ಮತ್ತು ರಾಜ್ಯ ಸರ್ಕಾರದ ನಿಯಮಗಳು ಸಂವಿಧಾನದತ್ತ ಮಾನವ ಹಕ್ಕುಗಳು ಮತ್ತು ಮೂಲಭೂತ ಹಕ್ಕುಗಳಿಗೆ ತದ್ವಿರುದ್ಧವಾಗಿವೆ. ಈ ದಮನಕಾರಿ ಕಾಯ್ದೆ ಮತ್ತು ನಿಯಮಗಳನ್ನು ಅಸಂವಿಧಾನಿಕ ಮತ್ತು ಕಾನೂನುಬಾಹಿರವೆಂದು ಘೋಷಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.