ಬೆಂಗಳೂರು: ನಕಲಿ ನೋಂದಣಿ ದಾಖಲೆ ಸೃಷ್ಟಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತಿಂಗಳೊಳಗೆ ಪೂರ್ಣಗೊಳಿಸುವಂತೆ ಎಸ್ಐಟಿಗೆ ಹೈಕೋರ್ಟ್ ಸೂಚನೆ ನೀಡಿದೆ.
ನಗರದ ವಿವಿಧ ಸಬ್ ರಿಜಿಸ್ಟ್ರಾರ್ ಕಚೇರಿಗಳ ನಕಲಿ ಸೀಲ್ ಮತ್ತು ಫ್ರಾಂಕಿಂಗ್ ಯಂತ್ರಗಳನ್ನು ಬಳಸಿ ನಕಲಿ ನೋಂದಣಿ ದಾಖಲೆಗಳನ್ನು ಸೃಷ್ಟಿ ಮಾಡಿರುವ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್, ಈ ಸಂಬಂಧ ತನಿಖೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸುವಂತೆ ವಿಶೇಷ ತನಿಖಾ ತಂಡಕ್ಕೆ ( ಎಸ್ಐಟಿ) ಗಡುವು ನೀಡಿದೆ.
ತ್ಯಾಗರಾಜನಗರ ನಿವಾಸಿ ಎಸ್. ನಾರಾಯಣ ಅವರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಸಿಬಿಐಗೆ ವಹಿಸುವಂತೆ ಮನವಿ ಮಾಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಸಿ.ಶರ್ಮ ಅವರ ನೇತೃತ್ವದ ವಿಭಾಗೀಯ ಪೀಠ, ಮೂರು ತಿಂಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಬೇಕು ಎಂದು ಎಸ್‌ಐಟಿಗೆ ಸೂಚಿಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲ ವಿಜಯ್ ಕುಮಾರ್ ಪಾಟೀಲ್, ಪ್ರಕರಣ ಸಂಬಂಧ ಪ್ರತ್ಯೇಕ ಐದು ಎಫ್‌ಐಆರ್ ದಾಖಲಾಗಿವೆ. ಪ್ರಕರಣವನ್ನು ಐಎಎಸ್ ಅಧಿಕಾರಿ ನೇತೃತ್ವದ ಎಸ್‌ಐಟಿಯು ತನಿಖೆ ನಡೆಸುತ್ತಿದೆ. ಈವರೆಗೂ ನಡೆದಿರುವ ತನಿಖಾ ಪ್ರಗತಿ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇನ್ನೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರಬೇಕಿದೆ. ಹೀಗಾಗಿ, ಮುಂದಿನ ತನಿಖೆಯ ವರದಿ ಸಲ್ಲಿಸಲು ಮೂರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಕೋರಿದರು.