ಬೆಂಗಳೂರು: ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಮುಂದೂಡಿರುವ ಆದೇಶವನ್ನ ಮರು ಪರಿಶೀಲಿಸುವಂತೆ ಹೈಕೋರ್ಟ್ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.
ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಮುಂದೂಡಿರುವ ಆದೇಶ ರದ್ದುಪಡಿಸುವಂತೆ ಕೋರಿ ವಿಧಾನಪರಿಷತ್ ಸದಸ್ಯ ಕೆಸಿ ಕೊಂಡಯ್ಯ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.
ಪ್ರತಿವಾದಿಗಳಾದ ರಾಜ್ಯ ಸರ್ಕಾರ, ರಾಜ್ಯ ಚುನಾವಣಾ ಆಯೋಗ ಹಾಗೂ ಎಲ್ಲ 30 ಜಿಲ್ಲಾಧಿಕಾರಿಗಳಿಗೂ ನೋಟಿಸ್ ಜಾರಿ ಮಾಡಿರುವ ಹೈಕೋರ್ಟ್ ಜುಲೈ 1ರೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ. ಈ ವೇಳೆ, ಆಯೋಗಕ್ಕೆ ಆದೇಶಿಸಿರುವ ಪೀಠ, ರಾಜ್ಯ ಚುನಾವಣಾ ಆಯೋಗವು ಮೇ 28ರಂದು ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಮುಂದೂಡಿರುವ ಆದೇಶವನ್ನು ಮರು ಪರಿಶೀಲಿಸಬೇಕು. ಕೊರೊನಾಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಮೇ 30 ರಂದು ನೀಡಿರುವ ನಿರ್ದೇಶನಗಳು ಮತ್ತು ರಾಜ್ಯ ಸರ್ಕಾರ ಜೂನ್ 8 ರಂದು ಕೈಗೊಂಡ ಕ್ರಮಗಳನ್ನು ಗಮನಿಸಿ ಆಯೋಗ ತನ್ನ ಆದೇಶ ಮರುಪರಿಶೀಲಿಸಬೇಕು ಎಂದು ತಿಳಿಸಿದೆ.
ಸಂವಿಧಾನದ ಅನುಚ್ಛೇದ 243 (ಕೆ) ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 308ರ ಅಡಿ ಚುನಾವಣೆ ನಡೆಸುವ ಅಧಿಕಾರವನ್ನ ರಾಜ್ಯ ಚುನಾವಣಾ ಆಯೋಗ ಹೊಂದಿದೆ. ಹಾಗೆಯೇ ಅನುಚ್ಛೇದ 243(ಇ) ಅಡಿ ಚುನಾವಣೆ ತಡೆಹಿಡಿಯುವ, ಮುಂದೂಡುವ ಅಧಿಕಾರವನ್ನು ಹೊಂದಿದೆ. ಆದರೆ, ಅನುಚ್ಛೇದ 243 (ಇ)(1) ರ ಅಡಿ ಹಾಗೂ ಪಂಚಾಯತ್ ರಾಜ್ ಕಾಯ್ದೆ 308 (ಎ)(ಎ) ಅಡಿ ಅವಧಿಗೂ ಮುನ್ನ ಚುನಾವಣೆ ನಡೆಸಬೇಕು ಎಂಬ ಜವಾಬ್ದಾರಿಯನ್ನು ಹೊಂದಿದೆ. ಹೀಗಾಗಿ ಅವಧಿಗೆ ಮುನ್ನ ಚುನಾವಣೆ ನಡೆಸುವ ನಿಟ್ಟಿನಲ್ಲಿ ಆಯೋಗ ಕಾರ್ಯ ಪ್ರವೃತ್ತವಾಗಬೇಕಾದ ಅಗತ್ಯವಿದ್ದು, ತನ್ನ ಆದೇಶವನ್ನು ಮುಂದಿನ ವಿಚಾರಣೆ ಒಳಗೆ ಮರುಪರಿಶೀಲಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಪಿಐಎಲ್ ಸಾರಾಂಶ:2020ರ ಮೇ 30ಕ್ಕೆ ಅವಧಿ ಕೊನೆಗೊಂಡ ರಾಜ್ಯದ 6015 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಬೇಕಿತ್ತು. ಆದರೆ, ಮೇ 28ರಂದು ಆದೇಶ ಹೊರಡಿಸಿ ಚುನಾವಣೆಗಳನ್ನು ಮುಂದೂಡಲಾಗಿದೆ. ಚುನಾವಣಾ ಆಯೋಗದ ಈ ಆದೇಶವನ್ನು ರದ್ದುಗೊಳಿಸಬೇಕು. ಹಾಗೆಯೇ ಪಂಚಾಯಿತಿಗಳಿಗೆ ಆಡಳಿತ ಅಧಿಕಾರಿಗಳನ್ನು ನೇಮಕ ಮಾಡುವ ಪ್ರಕ್ರಿಯೆಗೆ ತಡೆ ನೀಡಬೇಕು. ಅವಧಿ ಪೂರ್ಣಗೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸುವಂತೆ ಮತ್ತು ಚುನಾವಣಾ ವೇಳಾಪಟ್ಟಿ ಪ್ರಕಟಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಅಲ್ಲದೇ ರಾಜ್ಯ ಸರ್ಕಾರ ಮೀಸಲು ಪ್ರಕ್ರಿಯೆ ಪೂರ್ಣಗೊಳಿಸಿ ಸಕಾಲದಲ್ಲಿ ಆಯೋಗಕ್ಕೆ ಪಟ್ಟಿ ನೀಡಲು ನಿರ್ದೇಶಿಸಬೇಕು ಎಂದು ಕೋರಲಾಗಿದೆ.