ಬೆಂಗಳೂರು:ರಾಜ್ಯದ ಎಲ್ಲ ಅರೆನ್ಯಾಯಿಕ ಪ್ರಾಧಿಕಾರಗಳಲ್ಲಿ ವಿಡಿಯೋ ಕಾನ್ಫೆರೆನ್ಸ್‌ಗಳ ಮೂಲಕ ಪ್ರಕರಣಗಳ ವಿಚಾರಣೆಗೆ ಸಾಧ್ಯವಿರುವ ಕುರಿತಂತೆ ಪರಿಶೀಲನೆ ನಡೆಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್ ಸೂಚನೆ ನೀಡಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಮಂಜೇಗೌಡ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ಪೀಠವು, ಆಡಳಿತಾತ್ಮಕ ಅಧಿಕಾರಿಗಳು ಸಹಾ ಅರೆ ನ್ಯಾಯಾಂಗ ಕಾರ್ಯಗಳನ್ನು ನಿರ್ವಹಿಸುತ್ತಿದ್ದು, ಇದು ನಾಗರಿಕರ ಹಕ್ಕುಗಳ ಮೇಲೆ ಹೆಚ್ಚು ಪರಿಣಾಮಕಾರಿಯಾಗಿದೆ. ಹೀಗಾಗಿ ಆಡಳಿತಾತ್ಮ ಅಧಿಕಾರಿಗಳು ಕಾರ್ಯಕ್ಕೆ ಸಮಾನ ಪ್ರಾಮುಖ್ಯತೆ ನೀಡಬೇಕಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.
ದೇಶದ ಜನತೆಗೆ, ಸುಲಭವಾಗಿ ನ್ಯಾಯಾಲಯ ವಿಚಾರಣೆಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಸಲುವಾಗಿ ಪ್ರಸ್ತುತ ಎಲ್ಲ ನ್ಯಾಯಾಲಯಗಳಲ್ಲಿಯೂ ವಿಡಿಯೋ ಕಾನ್ಪೆರೆನ್ಸ್ ಮೂಲಕ ವಿಚಾರಣೆಗಳು ನಡೆಯುತ್ತಿವೆ. ಹೀಗಾಗಿ ಅರೆ ನ್ಯಾಯಾಂಗ ಪ್ರಾಧಿಕಾರಗಳಲ್ಲಿಯೂ ವಿಡಿಯೋ ಕಾನ್ಪೆರೆನ್ಸಿಂಗ್ ಮೂಲಕ ವಿಚಾರಣೆ ನಡೆಸುವುದಕ್ಕೆ ಸಾಧ್ಯವಿದಿಯೇ ಎಂಬುದನ್ನು ಪರಿಶೀಲಿಸಲು ಸೂಚಿಸಿದೆ.
ಅಲ್ಲದೇ, ಹಳೆಯ ಬಾಕಿ ಉಳಿದ ಪ್ರಕರಣಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡುವ ಸಲುವಾಗಿ ಅರೆ ನ್ಯಾಯಾಂಗ ಕಾರ್ಯಗಳನ್ನು ನಿರ್ವಹಿಸುವುದಕ್ಕಾಗಿ ಪ್ರತ್ಯೇಕ ತಂಡ ನೇಮಕ ಮಾಡುವ ಸಂಬಂಧವೂ ಪರಿಶೀಲನೆ ನಡೆಸಬೇಕು. ಅಲ್ಲದೆ, ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳ ಮಾದರಿಯಲ್ಲಿಯೇ ವೆಬ್‌ಸೈಟ್‌ಗಳಲ್ಲಿ ದಿನನಿತ್ಯದ ಆದೇಶಗಳು, ತೀರ್ಪುಗಳು ಸೇರಿದಂತೆ ಪ್ರಕರಣಗಳ ಎಲ್ಲ ಮಾಹಿತಿ ಲಭ್ಯವಾಗುವಂತೆ ನೋಡಿಕೊಳ್ಳಲು ನಿರ್ದೇಶನ ನೀಡಿದೆ.
ಹೈಕೋರ್ಟ್ ನೀಡಿದ ಪ್ರಮುಖ ನಿರ್ದೇಶನಗಳಿವು:ಅರೆ ನ್ಯಾಯಾಂಗ ಪ್ರಾಧಿಕಾರಗಳಲ್ಲಿ ಪ್ರಕರಣಗಳನ್ನು ವಿಚಾರಣೆಗೆ ನಿಗದಿ ಪಡಿಸಿರುವ ದಿನಾಂಕ, ದೈನಂದಿನ ಆದೇಶಗಳು, ದಾಖಲಾಗಿರುವ ಸಾಕ್ಷ್ಯಾಧಾರಗಳು, ಅರ್ಜಿ ಸಂಬಂಧ ನೀಡಿರುವ ನಿರ್ದೇಶನಗಳು ಮತ್ತು ಅಂತಿಮ ತೀರ್ಪು ಸೇರಿದಂತೆ ಪ್ರಕರಣದ ಎಲ್ಲ ಪ್ರಕ್ರಿಯೆಗಳ ವಿವರಗಳ ಅಗತ್ಯವಿರುವ ಸಂಬಂಧ ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು. ಹೈಕೋರ್ಟ್ ಆದೇಶಗಳ ಕುರಿತು ಇ-ಮೇಲ್, ಎಸ್‌ಎಸ್‌ಎಂಎಸ್‌ಗಳ ಮೂಲಕ ಅರ್ಜಿದಾರರಿಗೆ ಮತ್ತು ವಕೀಲರಿಗೆ ಕಾಲ ಕಾಲಕ್ಕೆ ತಿಳಿಸುವಂತೆ ವ್ಯವಸ್ಥೆ ಮಾಡಬೇಕು.
ಪ್ರಕರಣದ ವಿಚಾರಣೆ ಮುಂದೂಡುವ ಸಂದರ್ಭಗಳಲ್ಲಿ ಅರೆ ನ್ಯಾಯಾಂಗ ಪೀಠಾಧ್ಯಕ್ಷರು ಆಡಳಿತಾತ್ಮಕ ಕಾರ್ಯಗಳಲ್ಲಿ ನಿರತರಾಗಿದ್ದಾರೆ ಎಂಬುವ ಹೇಳಿಕೆಯನ್ನು ಹೊರತು ಪಡಿಸಿ ಯಾವ ಕಾರಣಕ್ಕಾಗಿ ಮುಂದೂಡಲಾಗುತ್ತಿದೆ ಎಂಬದರ ಕುರಿತು ಸ್ಪಷ್ಟವಾದ ಕಾರಣ ಉಲ್ಲೇಖಿಸಬೇಕು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ತನ್ನ ವ್ಯಾಪ್ತಿಯಲ್ಲಿರುವ ಎಲ್ಲ ಪ್ರಾಧಿಕಾರಗಳ ಮುಂದೆ ಅರೆ ನ್ಯಾಯಾಂಗ ಪ್ರಕ್ರಿಯೆಗಳ ಪ್ರತಿಯನ್ನು ಮೇಲ್ವಿಚಾರಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಅಲ್ಲದೆ, ಈ ನಿರ್ದೇಶನಗಳ ಕುರಿತು ಸಮಗ್ರ ಯೋಜನಾ ವರದಿ ಸಿದ್ಧಪಡಿಸಿಬೇಕು. ಜೊತೆಗೆ ನಿರ್ದೇಶನಗಳನ್ನು ಅನುಷ್ಠಾನಗೊಳಿಸುವ ಆದೇಶವನ್ನು ಏಪ್ರಿಲ್ 17ರಂದು ವರದಿ ಸಲ್ಲಿಬಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಮುಂದೂಡಿದೆ.
ಪ್ರಕರಣದ ಹಿನ್ನೆಲೆ ಏನು?:ಅರ್ಜಿದಾರರ ತಂದೆಯ ಜಮೀನಿನ ಖಾತಾ ವರ್ಗಾವಣೆಗೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲಾ ಪಂಚಾಯತ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನು ಸುಮಾರು 12 ವರ್ಷಗಳ ಕಾಲ ಬಾಕಿ ಉಳಿಸಿಕೊಳ್ಳಲಾಗಿತ್ತು. ಈ ನಡುವೆ ಅರ್ಜಿದಾರರು ಮೃತ ಪಟ್ಟಿದ್ದರು. ಆದರೆ, ಅರ್ಜಿಯ ವಿಚಾರಣೆಗೆ ಸುಮಾರು 111ಕ್ಕೂ ಹೆಚ್ಚು ದಿನಾಂಕಗಳನ್ನು ನೀಡಲಾಗಿತ್ತು. 111 ದಿನಾಂಕಗಳಲ್ಲಿಯೂ ಯಾವುದೇ ರೀತಿಯ ವಿಚಾರಣೆ ನಡೆಸಿರಲಿಲ್ಲ. ಈ ನಡುವೆ ಅರ್ಜಿದಾರರಿಗೆ ಮಾಹಿತಿ ನೀಡದೇ, ವಿಚಾರಣೆಯನ್ನೂ ನಡೆಸದೇ ಮುಕ್ತಾಯಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಮಂಜೇಗೌಡ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಈ ನಿರ್ದೇಶನಗಳನ್ನು ನೀಡಿದೆ.
ಇದನ್ನೂ ಓದಿ:ಬೆಳಗಾವಿ: 2D ಮೀಸಲಾತಿ ಗೆಜೆಟ್ ಪತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ