ಬೆಂಗಳೂರು :ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧೀನದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿದ್ಯಾರ್ಥಿಗಳಿಗಾಗಿ ನಡೆಸುತ್ತಿರುವ ಸರ್ಕಾರಿ ವಸತಿ ನಿಲಯಗಳಲ್ಲಿನ ವಾರ್ಡನ್ ಮತ್ತು ಮೇಲ್ವಿಚಾರಕರ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು, ಸಮಗ್ರ ವಿವರಣೆಯುಳ್ಳ ವರದಿ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.
ಎಸ್ಟಿ, ಎಸ್ಟಿ ಹಾಸ್ಟೆಲ್‌ಗಳಲ್ಲಿ ಸಿಬ್ಬಂದಿ ಕೊರತೆಯ ಕುರಿತಂತೆ ಮಾಧ್ಯಮಗಳ ವರದಿಯನ್ನು ಆಧರಿಸಿ, ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಸ್ವಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.
ಹಾಸ್ಟೆಲ್‌ಗಳಲ್ಲಿನ ಸಿಬ್ಬಂದಿ ಕೊರತೆಯಿಂದ ಅಲ್ಲಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ತೀವ್ರ ತೊಂದರೆಯಾಗಲಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಮಾಡುವ ವಿಚಾರದಲ್ಲಿ ಸಿಬ್ಬಂದಿ ಕೊರತೆ ಕಳವಳಕಾರಿಯಾಗಿದೆ ಎಂದು ನ್ಯಾಯಪೀಠ ತಿಳಿಸಿದೆ. ವಿಚಾರಣೆ ವೇಳೆ ಪ್ರಕರಣದಲ್ಲಿ ಅಮಿಕಾಸ್ ಕ್ಯೂರಿ(ನ್ಯಾಯಾಲಯಕ್ಕೆ ನೆರವಾಗುವವರು) ನಿತಿನ್ ರಮೇಶ್ ಹಾಜರಾಗಿ, ವಿದ್ಯಾರ್ಥಿ ನಿಲಯಗಳ ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಎಂದು ವಿವರಿಸಿದರು.
ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ, ಪ್ರಕರಣದ ಅಮಿಕಸ್ ಕ್ಯೂರಿ ಅವರು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾರ್ಗಸೂಚಿಗಳ ಪ್ರಸ್ತಾಪ ಮಾಡಿದ್ದಾರೆ. ಆ ಬಗ್ಗೆ ಸರ್ಕಾರ ಪ್ರತಿಕ್ರಿಯೆ ನೀಡಬೇಕಾಗಿದೆ. ಆದ್ದರಿಂದ ಸಮಗ್ರವಾದ ವಿವರಣೆಯುಳ್ಳ ಆಕ್ಷೇಪಣೆ ಸಲ್ಲಿಸಬೇಕು ಎಂದು ಸರ್ಕಾರದ ವಕೀಲರಿಗೆ ತಿಳಿಸಿತು. ಅಲ್ಲದೇ, ಆ ಕುರಿತ ವರದಿಯನ್ನು ಅಮಿಕಸ್ ಕ್ಯೂರಿ ಅವರಿಗೆ ಒಂದು ಪ್ರತಿಯನ್ನು ಅರ್ಜಿ ವಿಚಾರಣೆಗೂ ಬರುವ ಮುನ್ನ ಸಲ್ಲಿಸಬೇಕು ಎಂದು ಪೀಠ ತಿಳಿಸಿತು. ಅಲ್ಲದೇ, ರಾಜ್ಯದ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಸಮರೋಪಾದಿಯಲ್ಲಿ ಪ್ರಕ್ರಿಯೆ ಪ್ರಾರಂಭಿಸಿ ಆರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಕಳೆದ ವರ್ಷ ಆದೇಶಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರ ಗಮನ ಹರಿಸಬೇಕು ಎಂದು ಸೂಚನೆ ನೀಡಿತು.
ಪ್ರಕರಣದ ಹಿನ್ನೆಲೆ ಏನು ?: 2023ರ ಡಿ. 7 ರಂದು ಮರಾಠಿ ಪತ್ರಿಕೆ ‘ತರುಣ್ ಭಾರತ್’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ, ರಾಜ್ಯದ ಕೆಲ ಜಿಲ್ಲೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ನಡೆಸುತ್ತಿರುವ ಪರಿಶಿಷ್ಟ ಜಾತಿಯ ಬಾಲಕಿಯರ ಮತ್ತು ಬಾಲಕರ ಹಾಸ್ಟೆಲ್‌ನಲ್ಲಿ ಅಗತ್ಯ ಪ್ರಮಾಣದಲ್ಲಿ ಸಿಬ್ಬಂದಿ ಇಲ್ಲ. ಸಿಬ್ಬಂದಿಯ ನೇಮಕಾತಿಗೆ ನಿರ್ದಿಷ್ಟ ಮಾರ್ಗಸೂಚಿ ಇದ್ದರೂ ನೇಮಕಾತಿ ಮಾಡಿಲ್ಲ. ಕೆಲವೊಂದು ಜಿಲ್ಲೆಗಳಲ್ಲಿ 3-4 ಹಾಸ್ಟೆಲ್‌ಗಳಲ್ಲಿ ಕೇವಲ ಒಬ್ಬ ವಾರ್ಡನ್ ಇದ್ದಾರೆ. ರಾಜ್ಯದಲ್ಲಿ 1,297 ಪ್ರಿ ಮೆಟ್ರಿಕ್ ಹಾಸ್ಟೆಲ್‌ಗಳು ಇವೆ. 1,165 ಪೋಸ್ಟ್ ಮೆಟ್ರಿಕ್ ಹಾಸ್ಟೆಲ್‌ಗಳಿವೆ. ಆದರೆ, ವಾರ್ಡನ್ ಮತ್ತು ಅಧೀಕ್ಷಕರು 1,200ಕ್ಕಿಂತ ಕಡಿಮೆಯಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಗಂಭೀರ ದುಷ್ಪರಿಣಾಮ ಬೀರುತ್ತಿದೆ ಎಂದು ತಿಳಿಸಿತ್ತು.
ಅಲ್ಲದೇ, ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಲಿಯಿರುವ 400 ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. 200 ಖಾಯಂ ಹುದ್ದೆಗಳ ಅಧೀಕ್ಷಕರ ಹುದ್ದೆಗಳನ್ನು ಹಂತವಾರು ನೇಮಿಸಲಾಗುವುದು ಎಂಬುದಾಗಿ ಇಲಾಖೆ ಕಾರ್ಯದರ್ಶಿಯೊಬ್ಬರು ಹೇಳಿದ್ದಾರೆ. ಆದರೆ, ಕಾಲಕಾಲಕ್ಕೆ , ಖಾಯಂ ಸಿಬ್ಬಂದಿ ನೇಮಕಾತಿಗೆ ಯಾವುದೇ ಪ್ರಯತ್ನ ನಡೆಸಿಲ್ಲ ಎಂಬುದು ಈ ವರದಿಯಿಂದ ತಿಳಿಯಲಿದೆ ಎಂದು ತಿಳಿಸಿತ್ತು. ಈ ವರದಿ ಆಧರಿಸಿ ಹೈಕೋರ್ಟ್ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದೆ.
ಇದನ್ನೂ ಓದಿ:ಸರ್ಕಾರ ಬದಲಾದರೆ ಅಧಿಕಾರಿಗಳ ವಿರುದ್ಧದ ಪ್ರಕರಣ ಹಿಂಪಡೆಯಲು ಮುಂದಾಗಬಾರದು: ಹೈಕೋರ್ಟ್