ಬೆಂಗಳೂರು: ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ ಆಯೋಗದ ಅಧ್ಯಕ್ಷ ನೆಹರು ಓಲೇಕರ್ ಆಯ್ಕೆ ಕುರಿತು ಹೈಕೋರ್ಟ್ ವಿಭಾಗೀಯ ಪೀಠ ಸರ್ಕಾರಕ್ಕೆ ಹಾಗೂ ನೆಹರು ಓಲೇಕಾರ್ಗೆ ನೋಟಿಸ್ ನೀಡಿದೆ.
ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ, ಆಯೋಗದ ಆಯ್ಕೆ ಪ್ರಕ್ರಿಯೆ ಬಗ್ಗೆ ಹಾಗೂ ಅಪರಾಧ ಹಿನ್ನೆಲೆಯಿದ್ದರೂ ಆಯ್ಕೆಗೆ ಮುಂದಾಗಿರುವ ಬಗೆಗಿನ ವಿವರಣೆಯನ್ನು ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಹಾಗೂ ನೆಹರು ಓಲೇಕರ್ಗೆ ನೋಟಿಸ್ ನೀಡಿದೆ.
ಪ್ರಕರಣವನ್ನು ಫೆಬ್ರವರಿ 16ಕ್ಕೆ ಮುಂದೂಡಲಾಗಿದ್ದು, ಅಷ್ಟರೊಳಗೆ ಸರ್ಕಾರ ಹಾಗೂ ಅಧ್ಯಕ್ಷ ಓಲೇಕಾರ್ ನ್ಯಾಯಾಲಯಕ್ಕೆ ಉತ್ತರಿಸಬೇಕಿದೆ.
ಓದಿ:'ಕುಮಾರಸ್ವಾಮಿ ವಿಚಾರದಲ್ಲಿ ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡಿದ್ದೇನೆ'
ಅರ್ಜಿದಾರ ಕೆ.ಸಿ.ರಾಜಣ್ಣ ಪ್ರಕಾರ, ಸರ್ಕಾರ ಓಲೇಕಾರ್ ಅವರ ಅಪರಾಧ ಹಿನ್ನೆಲೆಯನ್ನು ಆಯೋಗದ ಅಧ್ಯಕ್ಷ ಹುದ್ದೆಯ ಆಯ್ಕೆ ವಿಷಯದಲ್ಲಿ ಪರಿಗಣಿಸಿಲ್ಲ. ಬಾಹ್ಯ ಒತ್ತಡದಿಂದ ಈ ನಿರ್ಧಾರ ಮಾಡಿರುವಂತಾಗಿದೆ. ಇದು ಪಾರದರ್ಶಕತೆ ಇಲ್ಲದ ನಿರ್ಧಾರ ಎಂದು ಆರೋಪಿಸಿದ್ದಾರೆ. ಎಸ್ಸಿ, ಎಸ್ಟಿ ಆಯೋಗಕ್ಕೆ ಸಿವಿಲ್ ಕೋರ್ಟ್ ಅಧಿಕಾರ ಇರುತ್ತದೆ. ಹೀಗಾಗಿ ನೆಹರು ಓಲೇಕಾರ್ ಆಯ್ಕೆಯನ್ನು ಅರ್ಜಿದಾರ ನ್ಯಾಯಾಲಯದ ಮೂಲಕ ಪ್ರಶ್ನಿಸಿದ್ದು, ಓಲೇಕಾರ್ ಆಯ್ಕೆಯನ್ನು ಅಸಿಂಧುಗೊಳಿಸಲು ಕೋರಿದ್ದಾರೆ.