ಬೆಂಗಳೂರು : ಸಹಕಾರ ಸಂಘಗಳನ್ನು ಲೋಕಾಯುಕ್ತ ವ್ಯಾಪ್ತಿಗೆ ತಂದು ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಸರ್ಕಾರ ಹಾಗೂ ಲೋಕಾಯುಕ್ತಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಲೋಕಾಯುಕ್ತ ಕಾಯ್ದೆ ತಿದ್ದುಪಡಿಯನ್ನು ಪ್ರಶ್ನಿಸಿ ಮೈಸೂರಿನ ದಿ ಮುಸ್ಲಿಂ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್' ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪಿ ಎಸ್ ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ, ಸರ್ಕಾರ ಹಾಗೂ ಲೋಕಾಯುಕ್ತಕ್ಕೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಸಹಕಾರ ಸಂಘಗಳನ್ನು ಲೋಕಾಯುಕ್ತ ವ್ಯಾಪ್ತಿಗೆ ತಂದು ಕರ್ನಾಟಕ ಲೋಕಾಯುಕ್ತ ಕಾಯ್ದೆ-1984ರ ಸೆಕ್ಷನ್ 2 (12) (ಜಿ) (ವಿ)ಗೆ ತಿದ್ದುಪಡಿ ಮಾಡಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಹಾಗೆಯೇ, ಸಹಕಾರ ಸಂಘಗಳು ಲೋಕಾಯುಕ್ತ ವ್ಯಾಪ್ತಿಗೆ ಬರುವುದಿಲ್ಲ ಎಂಬುದು ಅರ್ಜಿದಾರರ ವಾದವಾಗಿದೆ.
ಪ್ರಕರಣದ ಹಿನ್ನೆಲೆ :ಬ್ಯಾಂಕಿನ ಕಟ್ಟಡದ ನಿರ್ಮಾಣದ ವೇಳೆ ಅವ್ಯವಹಾರ ಮತ್ತು ಷೇರುದಾರರ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಬ್ಯಾಂಕಿನ ಸದಸ್ಯರಾದ ವೈ.ಎಸ್. ಚನ್ನಕೇಶವ ಎಂಬುವರು ದಿ. ಮುಸ್ಲಿಂ ಕೋ-ಅಪರೇಟಿವ್ ಬ್ಯಾಂಕ್ ವಿರುದ್ಧ 2006ರ ಮಾ.29ರಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಈ ದೂರನ್ನು ಆಧರಿಸಿ ಉಪಲೋಕಾಯುಕ್ತರು 2018ರ ಜು.21ರಂದು ಸಲ್ಲಿಸಿದ್ದ ವರದಿಯನ್ನು ಲೋಕಾಯುಕ್ತರು ಸಹಕಾರ ಇಲಾಖೆಗೆ ಕಳುಹಿಸಿ ಬ್ಯಾಂಕಿನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಅದರಂತೆ, ಲೋಕಾಯುಕ್ತ ಹಾಗೂ ಉಪಲೋಕಾಯುಕ್ತರಿಗೆ ಕ್ರಮ ಜಾರಿ ವರದಿ' (ಎಟಿಆರ್) ಸಲ್ಲಿಸುವಂತೆ ಸಹಕಾರ ಸಂಘಗಳ ನಿಬಂಧಕರಿಗೆ 2018ರ ಆ.29ರಂದು ಸಹಕಾರ ಇಲಾಖೆ ಸೂಚಿಸಿತ್ತು. ಈ ವಿಚಾರವಾಗಿ ಸಹಕಾರ ಸಂಘಗಳ ನಿಬಂಧಕರು ಅರ್ಜಿದಾರ ಬ್ಯಾಂಕಿಗೆ 2018ರ ಸೆ.11ರಂದು ನೋಟಿಸ್ ಜಾರಿಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ.
ಲೋಕಾಯುಕ್ತ ಕಾಯ್ದೆ-1984ರ ಸೆಕ್ಷನ್ 2(12) (ಜಿ) (ವಿ) ರದ್ದುಪಡಿಸಬೇಕು. ಉಪಲೋಕಾಯುಕ್ತರ ವರದಿ, ಸರ್ಕಾರಕ್ಕೆ ಲೋಕಾಯುಕ್ತರು ಬರೆದ ಪತ್ರ, ಸರ್ಕಾರ ಸಹಕಾರ ಸಂಘಗಳ ನಿಬಂಧಿಕರಿಗೆ ಬರೆದ ಪತ್ರ ಹಾಗೂ ಸಹಕಾರ ಸಂಘಗಳ ನಿಬಂಧಕರು ಅರ್ಜಿದಾರರಿಗೆ ಜಾರಿಗೊಳಿಸಿದ ನೋಟಿಸ್ ಮತ್ತು ಇವುಗಳಿಂದ ಸಂಬಧಿಸಿದ ಪ್ರಕ್ರಿಯೆಗಳನ್ನು ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿಮ ಕೋರಲಾಗಿದೆ.