ಕರ್ನಾಟಕ

karnataka

ತ್ಯಾಮಗೊಂಡ್ಲು ಪಟ್ಟಣ ಪಂಚಾಯ್ತಿ ದರ್ಜೆಗೇರಿಸಲು ಕೋರಿ ಪಿಐಎಲ್: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

By

Published : Oct 19, 2020, 10:04 PM IST

ಹೋಬಳಿ ಕೇಂದ್ರವಾಗಿರುವ ತ್ಯಾಮಗೊಂಡ್ಲು ಬೆಂಗಳೂರಿನಿಂದ 46 ಕಿ. ಮೀ. ಹಾಗೂ ನೆಲಮಂಗಲದಿಂದ 18 ಕಿ. ಮೀ. ದೂರದಲ್ಲಿದೆ. ಪ್ರಸ್ತುತ ಈ ಪ್ರದೇಶ ಸಂಪೂರ್ಣ ನಗರೀಕರಣಕ್ಕೆ ಒಳಗಾಗಿದೆ.

High Court
ಹೈಕೋರ್ಟ್

ಬೆಂಗಳೂರು: ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಗ್ರಾಮ ಪಂಚಾಯ್ತಿಯನ್ನು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಈ ಕುರಿತು ಹೈಕೋರ್ಟ್ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಎಚ್. ವೆಂಕಟೇಶ್ ದೊಡ್ಡೇರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪೌರಾಡಳಿತ ಇಲಾಖೆ, ಗ್ರಾಮಾಂತರ ಜಿಲ್ಲಾಧಿಕಾರಿ, ರಾಜ್ಯ ಚುನಾವಣಾ ಆಯೋಗ, ಜಿಲ್ಲಾ ಪಂಚಾಯ್ತಿ ಸಿಇಒ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ನವೆಂಬರ್ 2ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ಹಿರಿಯ ವಕೀಲ ಉದಯ್ ಹೊಳ್ಳ ವಾದಿಸಿ, ಹೋಬಳಿ ಕೇಂದ್ರವಾಗಿರುವ ತ್ಯಾಮಗೊಂಡ್ಲು ಬೆಂಗಳೂರಿನಿಂದ 46 ಕಿ. ಮೀ. ಹಾಗೂ ನೆಲಮಂಗಲದಿಂದ 18 ಕಿ. ಮೀ. ದೂರದಲ್ಲಿದೆ. ಪ್ರಸ್ತುತ ಈ ಪ್ರದೇಶ ಸಂಪೂರ್ಣ ನಗರೀಕರಣಕ್ಕೆ ಒಳಗಾಗಿದೆ. 1975ರಲ್ಲಿಯೇ ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಗೆ ಸೇರಿರುವ ಈ ಹೋಬಳಿ ಕೇಂದ್ರವನ್ನು ಪಟ್ಟಣ ಪಂಚಾಯ್ತಿಯಾಗಿ ಮಾಡಲಾಗಿತ್ತು. ಆದರೆ, ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಗ್ರಾಮ ಪಂಚಾಯ್ತಿಯಾಗಿ ಮಾಡಲಾಗಿದೆ ಎಂದು ವಿವರಿಸಿದರು.

ಅರ್ಜಿದಾರರ ಕೋರಿಕೆ - ಪಟ್ಟಣ ಪಂಚಾಯಿತಿಯಾಗುವ ಎಲ್ಲ ಅರ್ಹತೆಯನ್ನು ತ್ಯಾಮಗೊಂಡ್ಲು ಹೊಂದಿದೆ. 2011ರ ಜನಗಣತಿಯ ಪ್ರಕಾರ ಇಲ್ಲಿ 9187 ಜನಸಂಖ್ಯೆ ಇತ್ತು, ಪ್ರಸ್ತುತ 15 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ, ಶೇ.80ಕ್ಕೂ ಅಧಿಕ ಕೃಷಿಯೇತರ ಚಟುವಟಿಕೆಗಳು ನಡೆಯುತ್ತಿವೆ. ತ್ಯಾಮಗೊಂಡ್ಲು ಗ್ರಾ. ಪಂಚಾಯ್ತಿಯನ್ನು 2009, 2014 ಹಾಗೂ 2017ರಲ್ಲಿ ಮೂರು ಬಾರಿ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೇರಿಸಲು ಶಿಫಾರಸು ಮಾಡಲಾಗಿದೆ. ಅರ್ಜಿದಾರರೂ ಕೂಡ 2020ರ ಸೆ.23ರಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ತ್ಯಾಮಗೊಂಡ್ಲು ಗ್ರಾಮ ಪಂಚಾಯ್ತಿಯನ್ನು ಸರ್ಕಾರ ಕೂಡಲೇ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೆ ಏರಿಸಬೇಕು, ಅಲ್ಲಿಯವರೆಗೂ ಇದಕ್ಕೆ ಗ್ರಾಮ ಪಂಚಾಯ್ತಿ ಚುನಾವಣೆ ನಡೆಸದಂತೆ ನಿರ್ದೇಶಿಬೇಕೆಂದು ಅರ್ಜಿದಾರರು ಕೋರಿದ್ದಾರೆ.

ABOUT THE AUTHOR

...view details