ಕರ್ನಾಟಕ

karnataka

ETV Bharat / state

ಲಾಕ್‌ಡೌನ್ ಪರಿಹಾರಕ್ಕಾಗಿ ಹೈಕೋರ್ಟ್ ಮೆಟ್ಟಿಲೇರಿದ ಅರ್ಚಕರು: ಸರ್ಕಾರಕ್ಕೆ ನೋಟಿಸ್

ಲಾಕ್‌ಡೌನ್ ಬಳಿಕ ಸಂಕಷ್ಟದಲ್ಲಿರುವ ಅರ್ಚಕರಿಗೆ ಪರಿಹಾರ ಘೋಷಿಸುವಂತೆ ಏ.2 ರಂದೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಅರ್ಚಕರನ್ನು ಪ್ಯಾಕೇಜ್ ಗೆ ಪರಿಗಣಿಸಿಲ್ಲ. ಆದ್ದರಿಂದ ಈ ಸಂಬಂಧ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಹೈಕೋರ್ಟ್​ಗೆ ಮನವಿ ಮಾಡಿದ್ದಾರೆ.

High Court  Notice to Government
ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

By

Published : May 20, 2020, 11:43 PM IST

ಬೆಂಗಳೂರು: ಲಾಕ್‌ಡೌನ್‌ ಬಳಿಕ ಸಂಕಷ್ಟಕ್ಕೆ ಸಿಲುಕಿರುವ ತಮಗೆ ಸರ್ಕಾರ ಯಾವುದೇ ನೆರವು ನೀಡಿಲ್ಲ. ಹೀಗಾಗಿ ತಮಗೂ ವಿಶೇಷ ಪ್ಯಾಕೇಜ್ ಘೋಷಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ‌ ಅರ್ಚಕರು ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ರಾಜ್ಯದ ಮುಜರಾಯಿ ದೇವಾಲಯಗಳ ಅರ್ಚಕರ ಪರವಾಗಿ ಬೆಂಗಳೂರಿನ ವಕೀಲ ಶ್ರೀಹರಿ ಕೌಸ್ತ ಹಾಗೂ ಅರ್ಚಕ ಕೆ.ಎಸ್.ಎನ್. ದೀಕ್ಷಿತ್ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಮೇ 27ಕ್ಕೆ ಮುಂದೂಡಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಲಾಕ್‌ಡೌನ್ ಬಳಿಕ ಸರ್ಕಾರ ಎ ಮತ್ತು ಬಿ ವರ್ಗದ ಅಧಿಸೂಚಿತ ದೇವಾಲಯಗಳ ಅರ್ಚಕರಿಗೆ ವೇತನ ಪಾವತಿಸಿಲ್ಲ. ಸಿ ವರ್ಗಕ್ಕೆ ಸೇರಿದ ದೇವಾಲಯಗಳಿಗೆ ವಾರ್ಷಿಕ ಕೇವಲ 48ಸಾವಿರ ರೂ. ತಸ್ತಿಕ್ ನೀಡಲಾಗುತ್ತಿದ್ದು, ಅದನ್ನು ಪೂಜಾ ಕಾರ್ಯಗಳಿಗೆ ಬಳಸಲಾಗುತ್ತದೆ. ಇದರಿಂದ ಅರ್ಚಕರಿಗೆ ಯಾವುದೇ ಆದಾಯವಿಲ್ಲದೆ, ತೀವ್ರ ತೊಂದರೆಗೆ ಒಳಗಾಗಿದ್ದಾರೆ ಎಂದು ಪೀಠಕ್ಕೆ ವಿವರಿಸಿದರು.

ಅರ್ಚಕರ ಬೇಡಿಕೆ: ಲಾಕ್‌ಡೌನ್ ಬಳಿಕ ಸಂಕಷ್ಟದಲ್ಲಿರುವ ಅರ್ಚಕರಿಗೆ ಪರಿಹಾರ ಘೋಷಿಸುವಂತೆ ಏ.2ರಂದೇ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಸರ್ಕಾರ ಮನವಿ ಪರಿಗಣಿಸಿಲ್ಲ. ಕಟ್ಟಡ ಕಾರ್ಮಿಕರು, ನೇಕಾರರು, ಆಟೋ ಚಾಲಕರು, ಕ್ಷೌರಿಕರು ಸೇರಿದಂತೆ ಹಲವರಿಗೆ ಸರ್ಕಾರ ಪರಿಹಾರ ಪ್ಯಾಕೆಜ್ ನೀಡಿದೆ. ಆದರೆ, ಅರ್ಚಕರನ್ನು ಪ್ಯಾಕೇಜ್ ಗೆ ಪರಿಗಣಿಸಿಲ್ಲ. ಆದ್ದರಿಂದ ಈ ಸಂಬಂಧ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರ್ಟ್ ಗೆ ಮನವಿ ಮಾಡಿದ್ದಾರೆ.

ABOUT THE AUTHOR

...view details