ಕರ್ನಾಟಕ

karnataka

ETV Bharat / state

ಅನಧಿಕೃತ ಕಟ್ಟಡಗಳ ತೆರವಿಗೆ 3 ವಾರಗಳಲ್ಲಿ ಕ್ರಿಯಾ ಯೋಜನೆ ಸಲ್ಲಿಸಿ: ಸರ್ಕಾರಕ್ಕೆ ಸೂಚನೆ - etv bharat kannada

ಅನಧಿಕೃತ ಕಟ್ಟಡಗಳ ತೆರವು ಸಂಬಂಧ ಸರ್ಕಾರ ಸೇರಿದಂತೆ ಎಲ್ಲ ಸಂಬಂಧಿಸಿದ ಸಂಸ್ಥೆಗಳು ಸಭೆ ನಡೆಸಿ ಸಮಗ್ರ ಕ್ರಿಯಾ ಯೋಜನೆ ಸಲ್ಲಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.

high-court-notice-to-government-for-eviction-of-unauthorized-buildings
ಅನಧಿಕೃತ ಕಟ್ಟಡಗಳ ತೆರವಿಗೆ 3 ವಾರಗಳಲ್ಲಿ ಕ್ರಿಯಾ ಯೋಜನೆ ಸಲ್ಲಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

By

Published : Aug 14, 2023, 9:48 PM IST

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿನ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಹೆಸರಿಗೆ ಮಾತ್ರ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ಮುಂದಿನ ಮೂರು ವಾರಗಳಲ್ಲಿ ಸಮಗ್ರ ಕ್ರಿಯಾ ಯೋಜನೆಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಅನಧಿಕೃತ ಕಟ್ಟಡಗಳ ತೆರವಿಗೆ ಸಂಬಂಧಿಸಿದಂತೆ ಹೈಕೋರ್ಟ್ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜಿ.ಎಸ್.ಕಮಲ್ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ಸರ್ಕಾರ ಸೇರಿದಂತೆ ಎಲ್ಲ ಸಂಬಂಧಿಸಿದ ಸಂಸ್ಥೆಗಳು ಸಭೆ ನಡೆಸಿ ಸಮಗ್ರ ಕ್ರಿಯಾ ಯೋಜನೆ ಸಲ್ಲಿಸಬೇಕು. ಜತೆಗೆ ಹಿಂದಿನ ಆದೇಶಗಳ ಅನುಪಾಲನಾ ವರದಿಯನ್ನೂ ಸಹ ಸಲ್ಲಿಸಬೇಕು ಎಂದು ನ್ಯಾಯಪೀಠ ನಿರ್ದೇಶನ ನೀಡಿತು. ಅಲ್ಲದೇ, ಹೈಕೋರ್ಟ್‌ನ ಹಿಂದಿನ ಆದೇಶಗಳ ಅನುಷ್ಠಾನದ ವಿಚಾರದಲ್ಲಿ ಏನೂ ಪ್ರಗತಿ ಆಗದಿರುವುದನ್ನು ಹಾಗೂ ಬಿಬಿಎಂಪಿ ಸುಮ್ಮನೆ ಕಾಟಾಚಾರಕ್ಕೆ ಅನಧಿಕೃತ ಕಟ್ಟಡಗಳ ತೆರವು ಕೈಗೊಂಡಿರುವ ಕುರಿತು ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ಅಮೈಕಾಸ್ ಕ್ಯೂರಿಯಾಗಿ ನೇಮಕಗೊಂಡಿರುವ ಹಿರಿಯ ನ್ಯಾಯವಾದಿ ಪ್ರಮೋದ್ ಕಟಾವಿ ಅವರು ವರದಿಯನ್ನು ಸಲ್ಲಿಸಿದರು.

ವರದಿ ಪರಿಶೀಲಿಸಿದ ನ್ಯಾಯಪೀಠ, ಕೋರ್ಟ್​ನ ಹಿಂದಿನ ಆದೇಶಗಳ ಪಾಲನೆ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಪಾಲಿಕೆಗೆ ತೆರವು ಕಾರ್ಯ ಕೈಗೊಳ್ಳಲು ಹೆಚ್ಚುವರಿ ಮಾನವ ಸಂಪನ್ಮೂಲ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಲಾಗಿತ್ತು, ಆ ನಿರ್ದೇಶನ ಪಾಲನೆ ಆಗಿದೆಯೋ ಇಲ್ಲವೋ ತಿಳಿದಿಲ್ಲ ಎಂದು ಹೇಳಿತು. ಅಲ್ಲದೆ, ವರದಿಯನ್ನು ಗಮನಿಸಿದರೆ ಎರಡು ಬಗೆಯ ಅನಧಿಕೃತ ಕಟ್ಟಡಗಳನ್ನು ಗುರುತಿಸಲಾಗಿದೆ. ದೊಡ್ಡ ಸಂಖ್ಯೆಯಲ್ಲಿ ನೋಟಿಸ್​ಗಳನ್ನು ಜಾರಿಗೊಳಿಸಲಾಗಿದೆ. ಆದರೆ ತೆರವು ಕೈಗೊಂಡಿರುವುದು ಬೆರಳೆಣಿಕೆಯಷ್ಟರಲ್ಲಿ ಮಾತ್ರ. ಇದು ಬಿಬಿಎಂಪಿ ಸ್ಪಷ್ಟವಾಗಿ ‘ಸೆಲೆಕ್ಟಿವ್ ಅಪ್ರೋಚ್’ ಪಾಲಿಸುತ್ತಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಅದೂ ಸಹ ತೆರವುಗೊಳಿಸುವುದು ತಾತ್ಕಾಲಿಕ ಸ್ಟ್ರಕ್ಚರ್​ಗಳಷ್ಟೇ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.

ಜತೆಗೆ, ಅನಧಿಕೃತ ಕಟ್ಟಡಗಳಿಗೆ ನೋಟಿಸ್ ನೀಡಿ ಪಾಲಿಕೆ ಸುಮ್ಮನಾಗಿದೆ. ಅದು ತೆರವು ಕಾರ್ಯಕ್ಕೆ ಮುಂದಾಗಿರುವುದು ಕೆಲವೇ ಕೆಲವು ವ್ಯಕ್ತಿಗಳ ವಿರುದ್ಧ, ಅವರ್ಯಾರು ಆರ್ಥಿಕವಾಗಿ ಶಕ್ತಿವಂತರಲ್ಲ, ಬಡವರು. ಹಾಗಾಗಿ ಸುಮ್ಮನೆ ಹೆಸರಿಗೆ ಮಾತ್ರ ಬಿಬಿಎಂಪಿ ತೆರವು ಕಾರ್ಯ ಕೈಗೊಳ್ಳುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿತು.

ಸಮಗ್ರ ಕ್ರಮ ಅಗತ್ಯ:ಅನಧಿಕೃತ ಕಟ್ಟಡಗಳ ವಿಚಾರವನ್ನು ಸಮಗ್ರ ರೀತಿಯಲ್ಲಿ ನೋಡಬೇಕಿದೆ. ಎಲ್ಲ ಬಾಧ್ಯಸ್ಥರು ಜಂಟಿಯಾಗಿ ಸೇರಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಒಂದೊಂದು ಸಂಸ್ಥೆಗಳು ಒಂದೊಂದು ದಿಕ್ಕಿಗೆ ಹೋದರೆ ಕೆಲಸ ಆಗದು. ಅದಕ್ಕಾಗಿ ಒಂದು ಸಮಗ್ರ ಕ್ರಿಯಾ ಯೋಜನೆ ರೂಪಿಸಬೇಕಿದೆ. ಈವರೆಗಿನ ಪ್ರಗತಿ ತೃಪ್ತಿ ತಂದಿಲ್ಲ. ಪ್ರಗತಿ ಕೇವಲ ಕಾಗದದಲ್ಲೇ ಉಳಿದಿದೆ ಎಂದು ನ್ಯಾಯಪೀಠ ಹೇಳಿತು.

ಬೆಂಗಳೂರು ನಗರ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಮತ್ತು ಅಭಿವೃದ್ದಿ ಹೊಂದುತ್ತಿರುವ ನಗರವಾಗಿದೆ. ಇಲ್ಲಿನ ಕಟ್ಟಡಗಳ ನಿರ್ಮಾಣ ನಿರಂತರವಾಗಿ ನಡೆಯುತ್ತಿರುತ್ತದೆ. ಅವುಗಳನ್ನು ರಾತ್ರೋರಾತ್ರಿ ನಿಲ್ಲಿಸಲಾಗದು. ಅವುಗಳ ಮೇಲ್ವಿಚಾರಣೆಗೆ ನಿರಂತರ ಮತ್ತು ಸಮಗ್ರ ಕ್ರಮ ಅಗತ್ಯವಿದ್ದು, ಆ ನಿಟ್ಟಿನಲ್ಲಿ ಬಿಬಿಎಂಪಿ, ಸರ್ಕಾರ ಸೇರಿ ಎಲ್ಲ ಭಾಗೀದಾರರು ಕ್ರಮ ಕೈಗೊಳ್ಳಬೇಕು ಎಂದು ಪೀಠ ಹೇಳಿತು.

ಹೈಕೋರ್ಟ್ ಹಿಂದಿನ ಅದೇಶವೇನು?:2009ರ ನ.25ರಂದು ಹೈಕೋರ್ಟ್ ವಿಭಾಗೀಯಪೀಠ ವಿವರವಾದ ಸರಣಿ ನಿರ್ದೇಶನಗಳನ್ನು ಬಿಬಿಎಂಪಿ ಮತ್ತು ಸರ್ಕಾರಕ್ಕೆ ನೀಡಿದೆ. ಅದರಲ್ಲಿ ಬಿಬಿಎಂಪಿ ಹಂತ ಹಂತವಾಗಿ ಅನಧಿಕೃತ ಕಟ್ಟಡಗಳ ಸಮೀಕ್ಷೆ ಮಾಡಬೇಕು ಮತ್ತು ಅವುಗಳ ತೆರವು ಕಾರ್ಯಾಚರಣೆಗೆ ಕ್ರಿಯಾ ಯೋಜನೆ ರೂಪಿಸಬೇಕು ಎಂಬುದು ಪ್ರಮುಖವಾದುದು. ಅಲ್ಲದೆ, ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಲು ಪಾಲಿಕೆಯಲ್ಲಿ ಅಗತ್ಯ ಸಿಬ್ಬಂದಿ ಇಲ್ಲದಿರುವುದರಿಂದ ಸರ್ಕಾರ ಪಾಲಿಕೆಗೆ ಅಗತ್ಯ ಯಂತ್ರೋಪಕರಣ ಹಾಗೂ ಮಾವನ ಸಂಪನ್ಮೂಲ ಒದಗಿಸಬೇಕು. ಈ ಕುರಿತು ಪಾಲಿಕೆ ಸರ್ಕಾರಕ್ಕೆ ಸಮಗ್ರವಾದ ಪ್ರಸ್ತಾವವನ್ನು ಸಲ್ಲಿಸಬೇಕು ಎಂದು ನಿರ್ದೇಶನ ನೀಡಿತ್ತು. ಆದರೆ, ಈ ಆದೇಶವನ್ನು ಪಾಲಿಸದ ಸರ್ಕಾರದ ಕ್ರಮಕ್ಕೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.

ಇದನ್ನೂ ಓದಿ:Upendra: ನಟ ಉಪೇಂದ್ರಗೆ ಹೈಕೋರ್ಟ್‌ ರಿಲೀಫ್‌; FIRಗೆ ತಡೆ

ABOUT THE AUTHOR

...view details