ಬೆಂಗಳೂರು: ನಗರದ ಸಂಡೇ ಬಜಾರ್ ಬಳಿಯ ಕೊಳಗೇರಿ ಪ್ರದೇಶದಲ್ಲಿದ್ದ ಕಾರ್ಮಿಕರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರ ಕುಟುಂಬಗಳಿಗೆ ತಲಾ 6,100 ರೂ. ಪರಿಹಾರ ಘೋಷಿಸಿರುವ ಸರ್ಕಾರದ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ಹೆಚ್ಚಿನ ಪರಿಹಾರ ನೀಡುವಂತೆ ಸೂಚಿಸಿದೆ.
ರಾಜ್ಯ ವಿಪತ್ತು ನಿಧಿಯಿಂದ ಗುಡಿಸಲು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡಿರುವ ಕ್ರಮ ಸರಿಯಿಲ್ಲ. ಅಮಾಯಕ ಜನರ ಗುಡಿಸಲುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆಯನ್ನು ಪ್ರಕೃತಿ ವಿಕೋಪದಂತೆ ಪರಿಗಣಿಸಲು ಬರುವುದಿಲ್ಲ. ಸರ್ಕಾರ ನೀಡಿರುವ 6,100 ರೂಪಾಯಿ ಪರಿಹಾರ ಹಣದಲ್ಲಿ ಕಾರ್ಮಿಕರು ಮತ್ತೆ ತಮ್ಮ ಗೂಡು ಕಟ್ಟಿಕೊಳ್ಳುವುದು ಹೇಗೆ? ಸೂಕ್ತ ಪರಿಹಾರ ಮೊತ್ತವನ್ನು ನೀಡಲು ಸರ್ಕಾರ ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಲಾಕ್ಡೌನ್ ಸಂದರ್ಭದಲ್ಲಿ ಸಂಡೇ ಬಜಾರ್ನಲ್ಲಿದ್ದ ಕಲಬುರಗಿ ಮೂಲದ ಕೂಲಿ ಕಾರ್ಮಿಕರ ಗುಡಿಸಲುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಹೀಗಾಗಿ ಕಾರ್ಮಿಕರಿಗೆ ನ್ಯಾಯ ನೀಡುವ ದೃಷ್ಟಿಯಿಂದ ಕ್ರಮ ಜರುಗಿಸಬೇಕು ಎಂದು ಕೋರಿ ವಕೀಲೆ ವೈಶಾಲಿ ಹೆಗಡೆ ಹೈಕೋರ್ಟ್ಗೆ ಪತ್ರ ಬರೆದಿದ್ದರು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಪತ್ರವನ್ನು ಆಧರಿಸಿ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿತ್ತು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ಅವರ ನೇತೃತ್ವದ ವಿಭಾಗೀಯ ಪೀಠ, ಸರ್ಕಾರದ ಪರ ವಕೀಲರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದೆ. ಕಿಡಿಗೇಡಿಗಳು ಕಾರ್ಮಿಕರು ಜೀವಿಸುವ ಹಕ್ಕನ್ನೇ ಹಾಳು ಮಾಡಿದ್ದಾರೆ. ಇಂತಹ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದ ಕೇವಲ 6,100 ರೂ. ಪರಿಹಾರ ಸಾಕೇ?, ತಮ್ಮ ಮನೆಯನ್ನೇ ಕಳೆದುಕೊಂಡಿರುವ ಕಾರ್ಮಿಕರು ಇಷ್ಟು ಸಣ್ಣ ಮೊತ್ತದಲ್ಲಿ ಮನೆ ಕಟ್ಟಿಕೊಳ್ಳಲು ಸಾಧ್ಯವೇ ಎಂದು ಪ್ರಶ್ನಿಸಿದೆ.