ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿವೆ. ಸೋಂಕು ನಿಯಂತ್ರಿಸಲು ಅವಶ್ಯಕವಾಗಿರುವ ಮಾಸ್ಕ್ಗಳ ಬೆಲೆ ನಿಯಂತ್ರಣ ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಕೊರೊನಾ ನಿಯಂತ್ರಣ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಲಿಖಿತ ಮಾಹಿತಿ ನೀಡಿ, ರಾಜ್ಯದಲ್ಲಿ ಸಾಕಷ್ಟು ಮಾಸ್ಕ್ ಲಭ್ಯವಿವೆ. ಮಾಸ್ಕ್ ಗಳ ಬೆಲೆ 60 ರಿಂದ 300 ರೂಪಾಯಿವರೆಗಿದೆ. ಇವುಗಳ ಬೆಲೆಯನ್ನು ಮಾರುಕಟ್ಟೆ ಮೌಲ್ಯಕ್ಕೆ ನಿರ್ಧರಿಸಲು ಬಿಡಲಾಗಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ರಾಜ್ಯದಲ್ಲಿ ಪ್ರತಿದಿನವೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ತಜ್ಞರ ಅಭಿಪ್ರಾಯದಂತೆ ಮಾಸ್ಕ್ ಸೋಂಕು ತಡೆಗಟ್ಟಲು ಅವಶ್ಯಕ ಸಾಧನವಾಗಿದೆ. ಇಂತಹ ಸಂದರ್ಭದಲ್ಲಿ ಮಾಸ್ಕ್ ದರ ನಿಗದಿಯನ್ನು ಮಾರುಕಟ್ಟೆ ನಿರ್ಣಯಕ್ಕೇ ಬಿಟ್ಟರೆ ಜನ ಸಾಮಾನ್ಯರು ಖರೀದಿಸುವುದು ಹೇಗೆ?. ಎನ್-95 ಮಾಸ್ಕ್ ಗಳ ಬೆಲೆಯಲ್ಲಿ 60 ರಿಂದ 300 ರೂ.ವರೆಗೆ ವ್ಯತ್ಯಾಸ ಇದೆ. ಪ್ರಸ್ತುತ ಸಂದರ್ಭದಲ್ಲಿ ಮಾಸ್ಕ್‌ಗಳನ್ನು ರಿಯಾಯಿತಿ ದರದಲ್ಲಿ ಜನರಿಗೆ ಪೂರೈಸುವ ಅಗತ್ಯವಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಸ್ಕ್ ದರ ನಿಗದಿಯನ್ನು ಮಾರುಕಟ್ಟೆ ಮೌಲ್ಯಕ್ಕೇ ನಿರ್ಧರಿಸಲು ಬಿಡುವಷ್ಟು ಅಸಹಾಯಕವಾಗಿಲ್ಲ ಎಂದು ಕೋರ್ಟ್ ಭಾವಿಸಿದೆ. ನ್ಯಾಯಾಲಯದ ಈ ಇಂಗಿತವನ್ನು ಸಂಬಂಧಿಸಿದ ಇಲಾಖೆಗೆ ತಿಳಿಸಬೇಕು. ಹಾಗೆಯೇ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಸ್ಕ್ ದರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ಮುಂದೂಡಿತು.