ಬೆಂಗಳೂರು: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಐತಿಹಾಸಿಕ ಜುಮ್ಮಾ ಮಸೀದಿಯಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಮದರಸಾವನ್ನು ತಡೆಹಿಡಿಯಲು ಆದೇಶಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಅಭಿಷೇಕ್ ಗೌಡ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠವು ಕೇಂದ್ರ ಸಂಸ್ಕೃತಿ ಸಚಿವಾಲಯ, ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣಾ ಇಲಾಖೆಯ ಮಹಾ ನಿರ್ದೇಶಕರು, ಕರ್ನಾಟಕ ಕಂದಾಯ ಇಲಾಖೆ ಮತ್ತು ಮಂಡ್ಯ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿತು.
ಅರ್ಜಿಯಲ್ಲಿ ಏನಿದೆ?: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಪ್ರಸಿದ್ಧ ಪ್ರವಾಸ ತಾಣವಾಗಿದೆ. ಶ್ರೀರಂಗಪಟ್ಟಣದ ಜುಮ್ಮಾ ಮಸೀದಿಯನ್ನು ಮೈಸೂರು ಅರಸ ಟಿಪ್ಪು ಸುಲ್ತಾನ್ ತನ್ನ ಆಡಳಿತಾವಧಿಯಲ್ಲಿ ನಿರ್ಮಿಸಿದ್ದರು. ಇದರಿಂದ ಈ ಮಸೀದಿಯನ್ನು ಐತಿಹಾಸಿಕ ಮತ್ತು ಪ್ರಾಚೀನ ಸ್ಮಾರಕ ಎಂಬುದಾಗಿ ಭಾರತೀಯ ಸರ್ವೇಕ್ಷಣಾ ಇಲಾಖೆ ಘೋಷಿಸಿ, ಸಂರಕ್ಷಣೆ ಮಾಡುತ್ತಿದೆ. ಆದರೆ, ಈ ಸ್ಮಾರಕದ ಒಳಗೆ ಅನಧಿಕೃತವಾಗಿ ವಸತಿ ಮದರಸಾ ನಡೆಸಲಾಗುತ್ತಿದೆ. ಅಲ್ಲಿ ಸುಮಾರು 50-60 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾ, ಅಲ್ಲಿಯೇ ತಂಗಿದ್ದಾರೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.