ಬೆಂಗಳೂರು:ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಪುರಾತನ ಮತ್ತು ಸಂರಕ್ಷಿತ ಸ್ಮಾರಕವಾಗಿರುವ ಕುಮಾರಸ್ವಾಮಿ ದೇವಸ್ಥಾನದ ಸುತ್ತಮುತ್ತಲ ಪ್ರದೇಶದ ಸ್ವಾಮಿಮಲೈ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ತಡೆಗೆ ಆದೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸಂಡೂರಿನ ಶ್ರೀಶೈಲ ಆಳದಹಳ್ಳಿ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯು ಹೈಕೋರ್ಟ್ನಲ್ಲಿ ನಡೆಯಿತು.
ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಲೆ ಅವರ ನೇತೃತ್ವದ ವಿಭಾಗೀಯ ಪೀಠವು ಕೇಂದ್ರ ಸಂಸ್ಕೃತಿ ಸಚಿವಾಲಯ, ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರು, ಭಾರತೀಯ ಸರ್ವೇಕ್ಷಣಾ ಇಲಾಖೆ ಹಾಗೂ ಐದು ಗಣಿ ಕಂಪನಿಗಳಿಗೆ ಸೇರಿದಂತೆ ಒಟ್ಟು 17 ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.
ಏಳು ಮತ್ತು ಎಂಟನೇ ಶತಮಾನದ ಬಾದಾಮಿ ಚಾಲುಕ್ಯರ ಅವಧಿಯಲ್ಲಿ ಈ ಕುಮಾರಸ್ವಾಮಿ ದೇವಸ್ಥಾನವನ್ನು ನಿರ್ಮಿಸಲಾಗಿದೆ. ದೇವಸ್ಥಾನದ ಸುತ್ತಲೂ ಜೀವ ವೈವಿಧ್ಯ ಮತ್ತು ಔಷಧೀಯ ಗುಣವುಳ್ಳ ಸಸಿಗಳನ್ನು ಹೊಂದಿರುವ ಸ್ವಾಮಿಮಲೈ ಕಾಡು ಇದೆ. ಸ್ವಾಮಿಮಲೈ ಬೆಟ್ಟದ 2.5 ಎಕರೆ ಜಾಗದಲ್ಲಿ ಈ ಕುಮಾರಸ್ವಾಮಿ ದೇವಸ್ಥಾನವನ್ನು ರಾಷ್ಟ್ರೀಯ ಸಂರಕ್ಷಿತ ಮತ್ತು ಪುರಾತನ ಸ್ಮಾರಕವಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ದಕ್ಷಿಣ ಪ್ರಸ್ಥಭೂಮಿಯ ಪಶ್ಚಿಮ ಘಟ್ಟವೆಂದೇ ಸ್ವಾಮಿಮಲೈ ಬೆಟ್ಟವು ಖ್ಯಾತಿ ಪಡೆದಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.