ಬೆಂಗಳೂರು :ರಾಜಧಾನಿಯಲ್ಲಿರುವ ಶೌಚಾಲಯಗಳಲ್ಲಿನ ಶುಚಿತ್ವದ ಕೊರತೆ ನಗರದ ಸ್ವಚ್ಛತೆಗೂ ಮಾರಕವಾಗುತ್ತಿದೆ ಎಂಬ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ನಗರದಲ್ಲಿರುವ ಶೌಚಾಲಗಳು ಹಾಗೂ ಅವುಗಳ ನಿರ್ವಹಣೆ ಕುರಿತು ವರದಿ ನೀಡುವಂತೆ ಬಿಬಿಎಂಪಿಗೆ ನಿರ್ದೇಶಿಸಿದೆ.
ನಗರದಲ್ಲಿ ಶೌಚಾಲಯಗಳ ಕೊರತೆ ವಿಚಾರವಾಗಿ ಲೆಟ್ಜ್ ಕಿಟ್ ಫೌಂಡೇಶನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಬಿಬಿಎಂಪಿ ಪರ ವಕೀಲರು ನ್ಯಾಯಾಲಯದ ನಿರ್ದೇಶನದ ಮೇರೆಗೆ ಲೋಕಲ್ ಸೆಲ್ಫ್ ಗವರ್ನೆನ್ಸ್ ಸಂಸ್ಥೆಯು ನಗರದ ಶೌಚಾಲಯಗಳ ಕುರಿತು ನಡೆಸಿದ ಸರ್ವೆ ವರದಿಯನ್ನು ಪೀಠಕ್ಕೆ ಸಲ್ಲಿಸಿದರು.
ವರದಿ ಪರಿಶೀಲಿಸಿದ ಪೀಠ, ದೇಶದ ಇತರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಶೌಚಾಲಯಗಳು ತುಂಬಾ ಕಡಿಮೆ ಇವೆ. ಇರುವ ಶೌಚಾಲಯಗಳ ನಿರ್ವಹಣೆಯೂ ಉತ್ತಮವಾಗಿಲ್ಲ. ಸಾಮುದಾಯಿಕ ಶೌಚಾಲಯಗಳಲ್ಲಿ ಶುಚಿತ್ವದ ಕೊರತೆಯಿದೆ ಎಂದು ಬೇಸರ ವ್ಯಕ್ತಪಡಿಸಿತು.
ಅಲ್ಲದೇ, ಬೆಂಗಳೂರಿಗೆ ಎಷ್ಟು ಶೌಚಾಲಯಗಳ ಅಗತ್ಯವಿದೆ? ಪ್ರತಿ ವಾರ್ಡ್‌ನಲ್ಲಿ ಎಷ್ಟು ಶೌಚಾಲಯಗಳ ಕೊರತೆಯಿದೆ? ಈ ಬಗ್ಗೆ ತಕ್ಷಣ ಮಾಹಿತಿ ನೀಡಬೇಕು. ಶೌಚಾಲಯಗಳ ನೈರ್ಮಲ್ಯಕ್ಕೆ ಗಮನ ನೀಡಬೇಕು. ಈ ಸಂಬಂಧ ಕೈಗೊಂಡ ಕ್ರಮಗಳ ಕುರಿತು ಪ್ರಮಾಣಪತ್ರ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ನಿರ್ದೇಶಿಸಿ, ವಿಚಾರಣೆಯನ್ನು ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರರ ಪರ ವಕೀಲರು ವಾದಿಸಿ, ನಗರದಲ್ಲಿ ಸಾರ್ವಜನಿಕರ ಶೌಚಾಲಯಗಳ ಕೊರತೆ ತೀವ್ರವಾಗಿದೆ. ಇರುವ ಶೌಚಾಲಯಗಳಲ್ಲೂ ಸ್ವಚ್ಛತೆ ಕೊರತೆಯಿಂದಾಗಿ ಜನ ಶೌಚಾಲಯಗಳಿಗೆ ಪರ್ಯಾಯ ಜಾಗ ಹುಡುಕಿಕೊಳ್ಳುತ್ತಿದ್ದಾರೆ. ಇದರ ಪರಿಣಾಮ ನಗರದ ಸ್ವಚ್ಛತೆಯೂ ಹಾಳಾಗುತ್ತಿದೆ. ಕೆಲವೆಡೆ ಮುಜುಗರದ ಸಂಗತಿಗಳು ಕಂಡು ಬರ್ತಿವೆ ಎಂದು ವಿವರಿಸಿದರು.