ಬೆಂಗಳೂರು:ನಗರದ 159 ಕೆರೆಗಳ ಒತ್ತುವರಿಯನ್ನು 16 ವಾರಗಳಲ್ಲಿ ಪೂರ್ಣಗೊಳಿಸುವ ರೀತಿಯಲ್ಲಿ ಕಾರ್ಯಯೋಜನೆ ರೂಪಿಸಿ ಈ ಸಂಬಂಧ ಮುಂದಿನ ಆರು ವಾರಗಳಲ್ಲಿ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಹೈಕೋರ್ಟ್ ಸೂಚನೆ ನೀಡಿದೆ. ವಾರಕ್ಕೆ 10 ಕೆರೆಗಳಂತೆ 159 ಕೆರೆಗಳಲ್ಲಿನ ಒತ್ತುವರಿಯನ್ನು 16 ವಾರಗಳಲ್ಲಿ ಪೂರ್ಣಗೊಳಿಸಲು ಹೈಕೋರ್ಟ್ ಹೇಳಿದೆ.
ಬೆಂಗಳೂರಿನ ಸಿಟಿಜನ್ ಆ್ಯಕ್ಷನ್ ಗ್ರೂಪ್ ಸೇರಿದಂತೆ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿದ್ದು, ಬಿಬಿಎಂಪಿ ಪರ ವಕೀಲರು ಎರಡು ವರದಿಗಳನ್ನು ಸಲ್ಲಿಸಿದರು. ಇದನ್ನು ಪರಿಶೀಲಿಸಿದ ನ್ಯಾಯಪೀಠ, ಒತ್ತುವರಿಗೆ ಸಂಬಂಧಿಸಿದಂತೆ ದಾಖಲಾದ ಮಾಹಿತಿ ಆಧರಿಸಿ ಏಳು ದಿನಗಳ ಬದಲಿಗೆ ಮೂರು ದಿನದಲ್ಲಿ ಮಾಡಬೇಕು. ಆನಂತರ ಚಟುವಟಿಕೆಯನ್ನು ಏಳು ದಿನಗಳ ಒಳಗೆ ಪೂರ್ಣಗೊಳಿಸಬೇಕು. ಇದರಿಂದ ಇಡೀ ಪ್ರಕ್ರಿಯೆ ವೇಗ ಪಡೆಯಲಿದ್ದು, ಇಡೀ ಪ್ರಕ್ರಿಯೆ 76 ದಿನದಲ್ಲಿ ಮುಗಿಯುತ್ತದೆ ಸರಾಸರಿ 70 ದಿನದಲ್ಲಿ ಪೂರ್ಣಗೊಳಿಸಬೇಕು. ನ್ಯಾಯಾಲಯ ಮಾಡಿರುವ ಬದಲಾವಣೆಗೆ ಬಿಬಿಎಂಪಿ ಪರ ವಕೀಲರು ಅಧಿಕಾರಿಗಳ ಸೂಚನೆ ಮೇರೆಗೆ ಸಮ್ಮತಿಸಿದ್ದಾರೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
172 ದಿನಗಳ ಅಗತ್ಯ: ರಾಜಕಾಲುವೆಗಳ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಅನುಪಾಲನಾ ವರದಿಯಲ್ಲಿ 172 ದಿನಗಳು ಅಗತ್ಯ ಎಂದು ಹೇಳಲಾಗಿದೆ. ರಾಜಕಾಲುವೆಗಳ ಒತ್ತುವರಿ ಪತ್ತೆಗೆ 20 ದಿನ, ಆನಂತರ ತಹಶೀಲ್ದಾರ್ ಎದುರು ದೂರು ದಾಖಲಿಸಲು ಐದು ದಿನ, ಬಳಿಕ ಸಮೀಕ್ಷೆಗೆ ಆದೇಶಿಸಲು ಮತ್ತು ಮಾರ್ಕ್ ಮಾಡಲು ತಹಶೀಲ್ದಾರ್ಗೆ ಐದು ದಿನ, ಆನಂತರ ಸಮೀಕ್ಷೆಗೆ 50 ದಿನ, ಬಳಿಕ 10 ದಿನ ಸಮೀಕ್ಷೆ ರಚನೆ, ಬಳಿಕ ಒತ್ತುವರಿದಾರರಿಗೆ ಹತ್ತು ದಿನಗಳಲ್ಲಿ ನೋಟಿಸ್ ಜಾರಿ, ಅವರಿಂದ ಪ್ರತಿಕ್ರಿಯೆ ಪಡೆಯಲು ಏಳು ದಿನ, ಆನಂತರ 10 ದಿನಗಳ ಬಳಿಕ ತಹಶೀಲ್ದಾರ್ ಅವರಿಂದ ಅಂತಿಮ ಆದೇಶಕ್ಕೆ ಕಾಲಮಿತಿ ನಿಗದಿ ಮಾಡಲಾಗಿದೆ ಎಂದು ಅನುಪಾಲನಾ ವರದಿಯಲ್ಲಿ ಹೇಳಲಾಗಿದೆ.
ಮೇಲ್ಮನವಿಗೆ 30 ದಿನ ಸಮಯ: ಮೇಲ್ಮನವಿ ಸಲ್ಲಿಸಲು 30 ದಿನ, ಆನಂತರ ಸಿದ್ದತೆ ಮಾಡಿಕೊಂಡು ಒತ್ತುವರಿ ತೆರವು ಮಾಡಲು 15 ದಿನ ನಿಗದಿಪಡಿಸಲಾಗಿದೆ. ಆನಂತರ 10 ದಿನಗಳ ಒಳಗೆ ತಹಶೀಲ್ದಾರ್ ಅವರು ಭೂಕಬಳಿಕೆ ನಿಷೇಧ ನ್ಯಾಯಾಲಯದ ಮುಂದೆ ದೂರು ದಾಖಲಿಸಬೇಕು ಎಂದು ವಿವರಿಸಲಾಗಿದೆ. ಬೆಂಗಳೂರು ನಗರದಲ್ಲಿ 202 ಕೆರೆಗಳಿದ್ದು, ವಾರದಲ್ಲಿ 10 ಕೆರೆಗಳನ್ನು ಗುರುತಿಸಿ ಒತ್ತವರಿ ತೆರವು ಮಾಡುವ ಕಾರ್ಯ ಯೋಜನೆಯನ್ನು ಮಾಡಿಕೊಳ್ಳಲಾಗುತ್ತಿದೆ. ಈವರೆಗೂ 24 ಕೆರೆಗಳನ್ನು ಒತ್ತುವರಿ ಮುಕ್ತ ಕೆರೆಗಳಾಗಿವೆ. ಜತೆಗೆ, 19 ಕೆರೆಗಳು ಬಳಕೆಯಾಗದೇ ಉಳಿದುಕೊಂಡಿವೆ ಎಂದು ತಿಳಿಸಿದೆ.