ಬೆಂಗಳೂರು: ಕೋವಿಡ್ ಸೋಂಕನ್ನು ಸ್ವ್ಯಾಬ್ ಟೆಸ್ಟ್ ಬದಲು ಕೇವಲ ಪಲ್ಸ್ ಆಕ್ಸಿಮೀಟರ್ ಮೂಲಕವೇ ಪತ್ತೆ ಹಚ್ಚಲು ಸಾಧ್ಯವಿದೆ. ಈ ಕುರಿತು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಶ್ವಾಸಕೋಶ ತಜ್ಞ ವೈದ್ಯರೊಬ್ಬರು ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿರುವ ಹೈಕೋರ್ಟ್, ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ದೇಶಿಸಿದೆ.
ಕೋವಿಡ್ ಪತ್ತೆಗೆ ಸರಳ ವಿಧಾನ: ಸರ್ಕಾರಕ್ಕೆ ಮನವಿ ಸಲ್ಲಿಸಲು ಹೈಕೋರ್ಟ್ ಸೂಚನೆ
ಕೊರೊನಾ ಸೋಂಕನ್ನು ಸರಳವಾಗಿ ಪತ್ತೆ ಹಚ್ಚಲು ವಿಧಾನಗಳಿವೆ. ಈ ಬಗ್ಗೆ ಸರ್ಕಾರಕ್ಕೆ ನಿರ್ದೇಶನ ಮಾಡಬೇಕು ಎಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲು ಸೂಚಿಸಿದೆ.
ಈ ಕುರಿತು ನಗರದ ಶ್ವಾಸಕೋಶ ತಜ್ಞ ಡಾ. ಎನ್.ಜಿ.ಚೇತನ್ ಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಅರ್ಜಿಯಲ್ಲಿ ಮಾಡಿರುವ ಬಹುತೇಕ ಮನವಿಗಳು ಸರ್ಕಾರದ ನೀತಿಗೆ ಸಂಬಂಧಿಸಿವೆ. ಆ ಬಗ್ಗೆ ಕೋರ್ಟ್ ನಿರ್ಧರಿಸಲು ಸಾಧ್ಯವಿಲ್ಲ. ಆದ್ದರಿಂದ ಅರ್ಜಿದಾರರು ಸರ್ಕಾರಕ್ಕೆ ಮನವಿ ಸಲ್ಲಿಸಿದರೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ಪೀಠ ತಿಳಿಸಿದೆ.
ಅರ್ಜಿದಾರರ ಕೋರಿಕೆ: ಸೋಂಕು ಪತ್ತೆ ಹಾಗೂ ನಿಯಂತ್ರಣಕ್ಕೆ ಸರ್ಕಾರ ಅನಗತ್ಯ ನೈಟ್ ಕರ್ಫ್ಯೂ, ಸೀಲ್ಡೌನ್, ನಿರ್ಬಂಧಿತ ವಲಯ ಮತ್ತಿತರ ಕ್ರಮಗಳನ್ನು ಅನುಸರಿಸಿ ಶಂಕಿತ ಸೋಂಕಿತರನ್ನು ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸುತ್ತಿದೆ. ಇದರಿಂದ ಎಷ್ಟೋ ಮಂದಿ ಹೆದರಿ ಪರೀಕ್ಷೆಗಳನ್ನೇ ಮಾಡಿಸಿಕೊಳ್ಳುತ್ತಿಲ್ಲ. ಆದ್ದರಿಂದ ತೀರಾ ಸರಳವಾದ ಪಲ್ಸ್ ಆಕ್ಸಿಮೀಟರ್ ಬಳಸಿ ಪರೀಕ್ಷೆ ನಡೆಸಿದರೆ ಸುಲಭವಾಗಿ ಸೋಂಕು ಪತ್ತೆ ಹಚ್ಚಬಹುದು. ವೈದ್ಯಕೀಯವಾಗಿಯೂ ಇದು ದೃಢಪಟ್ಟಿದೆ. ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಕಡ್ಡಾಯ ಆರೋಗ್ಯ ವಿಮೆಯನ್ನು ಒದಗಿಸಬೇಕು. ಸದ್ಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು/ತಾಲೂಕು/ಜಿಲ್ಲಾ ಆಸ್ಪತ್ರೆಗಳ ಬಲವರ್ಧನೆ ಮಾಡಬೇಕು. ಅಲ್ಲಿ ಸೋಂಕಿತರಿಗೆ ಹೊರೆಯಾಗದಂತೆ ಕಡಿಮೆ ವೆಚ್ಚದಲ್ಲಿ ಸೂಕ್ತ ಚಿಕಿತ್ಸೆ ದೊರಕುವಂತಾಗಬೇಕು. ಆ ನಿಟ್ಟಿನಲ್ಲಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದರು.