ಕರ್ನಾಟಕ

karnataka

ETV Bharat / state

ಹೈಕೋರ್ಟ್ ಕಟ್ಟಡ ವಿಸ್ತರಣೆ: ಮುಖ್ಯ ನ್ಯಾಯಮೂರ್ತಿಗಳ ಮುಂದೆ ಪ್ರಸ್ತಾವ ಇಡಲು ಸೂಚನೆ - ಪ್ರಸನ್ನ ಬಾಲಚಂದ್ರ ವರಾಳೆ

ಹೈಕೋರ್ಟ್‌ ಕಟ್ಟಡ ವಿಸ್ತರಣೆ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಗಳನ್ನು ಹೈಕೋರ್ಟ್‌ನ ಕಟ್ಟಡ ಸಮಿತಿ ಪರಿಶೀಲಿಸಿ ತನ್ನ ಅಭಿಪ್ರಾಯವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಮಂಡಿಸಲು ಸೂಚಿಸಲಾಗಿದೆ.

Etv Bharathigh-court-notice-on-high-court-building-extension
ಹೈಕೋರ್ಟ್ ಕಟ್ಟಡ ವಿಸ್ತರಣೆ: ಪ್ರಸ್ತಾವ ಮುಖ್ಯ ನ್ಯಾಯಮೂರ್ತಿಗಳ ಮುಂದಿಡಲು ಸೂಚನೆ

By ETV Bharat Karnataka Team

Published : Jan 10, 2024, 10:50 PM IST

ಬೆಂಗಳೂರು: ಹೈಕೋರ್ಟ್‌ ಕಟ್ಟಡ ವಿಸ್ತರಣೆಗೆ ಹೆಚ್ಚಿನ ಸ್ಥಳಾವಕಾಶ ಕಲ್ಪಿಸುವ ವಿಚಾರದಲ್ಲಿ, ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಗಳನ್ನು ಹೈಕೋರ್ಟ್‌ನ ಕಟ್ಟಡ ಸಮಿತಿ ಪರಿಶೀಲಿಸಿ ತನ್ನ ಅಭಿಪ್ರಾಯವನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಮಂಡಿಸಲು ಸೂಚಿಸಲಾಗಿದೆ.

ಬೆಂಗಳೂರಿನ ಹೈಕೋರ್ಟ್ ಕಟ್ಟಡದ ನೆಲಮಹಡಿಯಲ್ಲಿ ಇರುವ ಕಚೇರಿಗಳನ್ನು ಸ್ಥಳಾಂತರಿಸಲು ಸೂಕ್ತ ಆದೇಶ ಹೊರಡಿಸುವಂತೆ ಕೋರಿ ವಕೀಲ ಎಲ್ ರಮೇಶ್ ನಾಯಕ್ ಮತ್ತು ಹೈಕೋರ್ಟ್ ಕಟ್ಟಡ ಸಂಕೀರ್ಣಕ್ಕೆ ಬೆಂಗಳೂರಿನ ಕೇಂದ್ರ ಭಾಗದಲ್ಲಿ 30ಕ್ಕೂ ಅಧಿಕ ಎಕರೆ ಜಮೀನು ಮಂಜೂರು ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಶರಣ ದೇಸಾಯಿ ಎಂಬುವವರು ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್​ ದೀಕ್ಷಿತ್​ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿ, ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಗಳು ಹೈಕೋರ್ಟ್‌ ಕಟ್ಟಡ ಸಮಿತಿ ಪರಿಶೀಲನೆ ನಡೆಸಿಸುತ್ತಿದೆ. ಪರಿಶೀಲನೆ ನಡೆಸಿದ ನಂತರ ತನ್ನ ಅಭಿಪ್ರಾಯ ಏನೆಂಬುದನ್ನು ಸಮಿತಿಯು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಮಂಡಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿತು.

ಅರ್ಜಿಯು 2023ರ ಸೆಪ್ಟಂಬರ್​ 21ರಂದು ವಿಚಾರಣೆಗೆ ಬಂದಿದ್ದ ವೇಳೆ ರಾಜ್ಯ ಸರ್ಕಾರ ಪರ ವಕೀಲರು, ಕಬ್ಬನ್‌ ಪಾರ್ಕ್‌ ನಲ್ಲಿರುವ ಚುನಾವಣೆ ಆಯೋಗದ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ, ಅಲ್ಲಿಯೇ ಹೈಕೋರ್ಟ್‌ ಆಡಳಿತ ವ್ಯವಹಾರಗಳ ನಿರ್ವಹಣೆಗಾಗಿ 10 ಮಹಡಿ ಮತ್ತು 3 ಮಹಡಿಯ ಪ್ರತ್ಯೇಕ ಕಟ್ಟಡ ನಿರ್ಮಾಣ ಮಾಡುವುದು ಹಾಗೂ ಹೈಕೋರ್ಟ್‌ ಆವರಣದಲ್ಲಿರುವ ಕ್ಯಾಂಟೀನ್‌ ಕಟ್ಟಡದ ಮೇಲೆ ಕಟ್ಟಡವೊಂದನ್ನು ನಿರ್ಮಾಣ ಮಾಡಲು ಸರ್ಕಾರ ಉದ್ದೇಶಿಸಿದೆ. ಜತೆಗೆ, ಇತರ ಮೂರು ಪ್ರಸ್ತಾವನೆಗಳಿದ್ದು, ಅವುಗಳನ್ನು ಹೈಕೋರ್ಟ್‌ಗೆ ಸಲ್ಲಿಸಿದೆ ಎಂದು ತಿಳಿಸಿದ್ದರು. ಅದನ್ನು ಪರಿಗಣಿಸಿದ್ದ ವಿಭಾಗೀಯ ಪೀಠ, ಸರ್ಕಾರದ ಪ್ರಸ್ತಾವನೆಗಳನ್ನು ಪರಿಶೀಲನೆ ನಡೆಸಿ ಅಭಿಪ್ರಾಯ ತಿಳಿಸಬೇಕು ಎಂದು ಹೈಕೋರ್ಟ್‌ ಕಟ್ಟಡ ಸಮಿತಿಗೆ ಸೂಚಿಸಿತ್ತು.

ಇದನ್ನೂ ಓದಿ:ಪಶು ಚಿಕಿತ್ಸಾಲಯಗಳ ಸ್ಥಳಾಂತರ: ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್

ABOUT THE AUTHOR

...view details