ಬೆಂಗಳೂರು:ಲಾಕ್‌ಡೌನ್ ಅವಧಿಯಲ್ಲಿ ಬೇಕಾಬಿಟ್ಟಿ ಅಡ್ಡಾಡಲು ಬಂದು ಸೀಜ್ ಆಗಿರುವ ವಾಹನಗಳನ್ನು ಅವರ ಮಾಲೀಕರಿಗೆ ವಾಪಸ್ ನೀಡುವಂತೆ ಹೈಕೋರ್ಟ್ ಪೊಲೀಸರಿಗೆ ಅನುಮತಿ ನೀಡಿದೆ.
ಲಾಕ್‌ಡೌನ್ ಅವಧಿಯಲ್ಲಿ ಜನರು ನ್ಯಾಯಾಲಯಗಳಿಗೆ ಬರಲು ಸಾಧ್ಯವಿಲ್ಲ. ಹೀಗಾಗಿ ಕೋರ್ಟ್ ಅಥವಾ ಪ್ರಾಧಿಕಾರಗಳ ಸೂಚನೆ ಮೇರೆಗೆ ಜಪ್ತಿ, ವಶ ಮತ್ತಿತರ ಕ್ರಮಕ್ಕೆ ಮುಂದಾಗದಂತೆ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಕೋರಿ ಮೊಹಮ್ಮದ್ ಆರೀಫ್ ಜಮೀಲ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಎ.ಎಸ್.ಓಕ ಮತ್ತು ನ್ಯಾ. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲ ವಿಕ್ರಂ ಹುಯಿಲ್ಗೋಳ, ಪೀಠಕ್ಕೆ ಲಿಖಿತ ಮನವಿ ಸಲ್ಲಿಸಿ ಜಪ್ತಿ ಮಾಡಿರುವ ವಾಹನಗಳನ್ನು ಬಿಡಗಡೆ ಮಾಡಲು ಪೊಲೀಸರಿಗೆ ಅನುಮತಿ ನೀಡಬೇಕು ಎಂದು ಕೋರಿದರು. ಕೋರಿಕೆ ಪುರಸ್ಕರಿಸಿದ ಪೀಠ, ಸೀಜ್ ಮಾಡಿರುವ ವಾಹನಗಳನ್ನು ಪೊಲೀಸರು ಬಿಡುಗಡೆ ಮಾಡುವಂತೆ ಸೂಚಿಸಿತು.
ಪೀಠ ತನ್ನ ಆದೇಶದಲ್ಲಿ, ಸೀಜ್ ಮಾಡಿರುವ ವಾಹನಗಳನ್ನು ಬಿಡುಗಡೆ ಮಾಡುವಂತೆ ಕೋರಿ ಜನರು ನ್ಯಾಯಾಲಯಗಳಿಗೆ ಅರ್ಜಿ ಸಲ್ಲಿಸಿದರೆ ಜನದಟ್ಟಣ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಹೀಗಾಗಿ ಪೊಲೀಸರು ಸಿಆರ್‌ಪಿಸಿ 102 (3) ಅಡಿ ಅಧಿಕಾರ ಚಲಾಯಿಸಿ ವಾಹನ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಿ. ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ 500 ರೂ. ದಂಡ ಮತ್ತು ನಾಲ್ಕು ಚಕ್ರದ ವಾಹನಗಳಿಗೆ 1000 ರೂ. ದಂಡ ವಿಧಿಸಿ. ಜತೆಗೆ ಲಾಕ್‌ಡೌನ್ ನಿಯಮಗಳನ್ನು ಮತ್ತೆ ಉಲ್ಲಂಘಿಸುವುದಿಲ್ಲ ಎಂದು ಬಾಂಡ್ ಬರೆಸಿಕೊಂಡು ಬಿಡುಗಡೆ ಮಾಡಿ ಎಂದು ಹೈಕೋರ್ಟ್, ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಲಾಕ್‌ಡೌನ್ ಜಾರಿ ಮಾಡಿದ ಬಳಿಕ ಮಾರ್ಚ್ 25ರಿಂದ ಈವರೆಗೆ ಬೆಂಗಳೂರು ನಗರ ಒಂದರಲ್ಲೇ 35 ಸಾವಿರ ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದರು.