ಬೆಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ವಿವಿಧ ವರ್ಗದ ಅಡಿಯಲ್ಲಿ ಚುನಾಯಿತರಾದ ಸದಸ್ಯರ ಹೆಸರುಗಳನ್ನು ಅಧಿಕೃತ ಗೆಜೆಟ್‍ನಲ್ಲಿ ಪ್ರಕಟಿಸಿ 15 ದಿನಗಳಲ್ಲಿ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಿಳಿಸಿದೆ.
ಈ ಕುರಿತಂತೆ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಸೇರಿದಂತೆ ಆರು ಮಂದಿ ಸದಸ್ಯರು ಸಲ್ಲಿಸಿದ ಅರ್ಜಿ ವಿಚಾರಣೆ ಹೈಕೋರ್ಟ್ ಏಕಸದಸ್ಯ ನ್ಯಾಯಾಲಯದಲ್ಲಿ ನಡೆಯಿತು.
ವಿಚಾರಣೆ ವೇಳೆ ಅರ್ಜಿದಾರರ ವಕೀಲರು ವಕ್ಫ್ ಮಂಡಳಿಗೆ 2019ರ ಮಾರ್ಚ್ 7ರಂದು ಚುನಾವಣೆ ನಡೆದು ಶಾಸನಸಭೆ ವರ್ಗದಲ್ಲಿ ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್, ಶಾಸಕರಾದ ತನ್ವೀರ್ ಸೇಠ್, ಕನೀಜ್ ಫಾತಿಮಾ, ಡಾ. ಮಹಮ್ಮದ್ ಯೂಸೂಫ್, ಕೆ. ಅನ್ವರ್ ಪಾಷಾ ಹಾಗೂ ರಾಜ್ಯ ವಕೀಲರ ಪರಿಷತ್ ವರ್ಗದಲ್ಲಿ ಆಸೀಫ್ ಅಲಿ ಚುನಾಯಿತರಾಗಿದ್ದರು. ಚುನಾವಣೆ ನಡೆದು 6 ತಿಂಗಳಾದರೂ ಸರ್ಕಾರ ಹಾಗೂ ಪ್ರಾದೇಶಿಕ ಆಯುಕ್ತರು ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾದ ಮಂಡಿಸಿದರು.
ಅರ್ಜಿದಾರರ ವಾದ ಆಲಿಸಿದ ನ್ಯಾಯಾಲಯ ಕರ್ನಾಟಕ ವಕ್ಫ್ ನಿಯಮಗಳು-2017ರ ಸೆಕ್ಷನ್ 40ರ ಪ್ರಕಾರ ಚುನಾಯಿತ ಸದಸ್ಯರ ಹೆಸರನ್ನು ಅಧಿಕೃತ ಗೆಜೆಟ್‍ನಲ್ಲಿ ಪ್ರಕಟಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಬೇಕು. ಬಳಿಕ ಪ್ರಾದೇಶಿಕ ಆಯುಕ್ತರು ಸೆಕ್ಷನ್ 41ರನ್ವಯ 15 ದಿನಗಳಲ್ಲಿ ಮಂಡಳಿಯ ಪ್ರಥಮ ಸಭೆ ಕರೆದು ಅಧ್ಯಕ್ಷರ ಚುನಾವಣೆ ನಡೆಸಬೇಕು ಎಂದು ತಿಳಿಸಿ ಅರ್ಜಿ ಇತ್ಯರ್ಥ ಪಡಿಸಿದೆ.