ಕರ್ನಾಟಕ

karnataka

ETV Bharat / state

ವ್ಯಾಪ್ತಿ ಮೀರಿ ದೂರು ಸಲ್ಲಿಸಿದ ಡಿಇಒ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಸೂಚನೆ - Karnataka State Pollution Control Board

ಪರಿಸರ ಅಧಿಕಾರಿಗಳಿಗೆ ಕಾನೂನು ಅರಿವು ಮೂಡಿಸಲು ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಕೆಎಸ್‌ಪಿಸಿಬಿ) ಅಧ್ಯಕ್ಷರಿಗೆ ಹೈಕೋರ್ಟ್​ ನಿರ್ದೇಶನ ನೀಡಿದೆ.

ಹೈಕೋರ್ಟ್
high court

By

Published : Sep 17, 2022, 6:40 AM IST

ಬೆಂಗಳೂರು: ಪರಿಸರ ಮಾಲಿನ್ಯಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಅನುಮತಿ ಪಡೆಯದೇ ಅಧಿಕಾರದ ವ್ಯಾಪ್ತಿ ಮೀರಿ ಕಲ್ಲು ಕ್ವಾರಿ ಮಾಲೀಕರೊಬ್ಬರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದ ಉಪ ಪರಿಸರ ಅಧಿಕಾರಿಯ (ಡಿಇಒ) ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಅಂತಹ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ(ಕೆಎಸ್‌ಪಿಸಿಬಿ) ಅಧ್ಯಕ್ಷರಿಗೆ ಸೂಚಿಸಿದೆ.

ಅಧಿಕಾರವಿಲ್ಲದಿದ್ದರೂ ಪರಿಸರ ಮಾಲಿನ್ಯ ಮತ್ತು ನೀರು ಕಾಯ್ದೆ ಉಲ್ಲಂಘಿಸಿ ದೂರು ದಾಖಲಿಸಿದ್ದಾರೆ. ಇದರಿಂದ ನ್ಯಾಯಾಲಯಗಳಲ್ಲಿ ಅನಗತ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ. ಹೀಗಾಗಿ, ಡಿಇಒ ದಾಖಲಿಸಿರುವ ದೂರು ಮತ್ತು ದೂರಿಗೆ ಸಂಬಂಧಿಸಿದಂತೆ ಹೊಸಕೋಟೆಯ ಜೆಎಂಎಫ್‌ಸಿ ನ್ಯಾಯಾಲಯಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ರದ್ದುಗೊಳಿಸುತ್ತಿರುವುದಾಗಿ ನ್ಯಾ.ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ತಿಳಿಸಿದೆ. ಅಲ್ಲದೇ, ಅರ್ಜಿದಾರರ ವಿರುದ್ಧ ಕಾನೂನು ಪ್ರಕ್ರಿಯೆಯನ್ನು ಅನುಸರಿಸಿ ದೂರು ಸಲ್ಲಿಸಲು ಮಂಡಳಿಗೆ ಸಂಪೂರ್ಣ ಸ್ವಾತಂತ್ರ್ಯನೀಡಿದೆ.

ಇದನ್ನೂ ಓದಿ:40ಕಿಮೀ​ ದೂರದ ಸ್ಥಳಕ್ಕೆ ವರ್ಗಾವಣೆ ಪ್ರಶ್ನಿಸಿದ್ದ PDO: ವರ್ಗಾವಣೆ ಮಾರ್ಗಸೂಚಿ ಪರಿಶೀಲಿಸಲು ಸರ್ಕಾರಕ್ಕೆ ಹೈಕೋರ್ಟ್​ ಸೂಚನೆ

ಕಾರ್ಯಾಗಾರ ಹಮ್ಮಿಕೊಳ್ಳಲು ಸೂಚನೆ: ಅಧಿಕಾರಿಗಳು ತನ್ನ ಅಧಿಕಾರದ ವ್ಯಾಪ್ತಿ ಮೀರಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲು ಮುಂದಾಗುತ್ತಿದ್ದಾರೆ. ಅಂತಹ ಪರಿಸರ ಅಧಿಕಾರಿಗಳಿಗೆ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿರ್ವಸಿಟಿಯ ಪರಿಸರ ಕಾನೂನು ಕೇಂದ್ರದ ಸಹಯೋಗದಲ್ಲಿ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಬೇಕು. ಪರಿಸರ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಿ ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಎದುರಾಗದಂತೆ ಕ್ರಮ ಕೈಗೊಳ್ಳಬೇಕು. ಜತೆಗೆ, ಕಾರ್ಯಾಗಾರವನ್ನು ಹಮ್ಮಿಕೊಂಡಿರುವ ಸಂಬಂಧ ಅನುಪಾಲನಾ ವರದಿಯನ್ನು ಸಲ್ಲಿಸಬೇಕು ಎಂದು ಮಂಡಳಿಗೆ ಸೂಚಿಸಿ ವಿಚಾರಣೆಯನ್ನು ಡಿಸೆಂಬರ್ 12ಕ್ಕೆ ಮುಂದೂಡಿದೆ.

ಸುಪ್ರೀಂ ಕೋರ್ಟ್, ಹೈಕೋರ್ಟ್ ಪ್ರತಿ ತಲುಪಿಸಲು ರಿಜಿಸ್ಟ್ರಾರ್‌ಗೆ ಸೂಚನೆ: ಕ್ರಿಮಿನಲ್ ಆರೋಪ ಪ್ರಕರಣದಲ್ಲಿ ದೂರು ದಾಖಲಾದ ಬಳಿಕ ಆರೋಪಿತರ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಳ್ಳುವ ಕುರಿತು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಈಗಾಗಲೇ ಹಲವು ಪ್ರಕರಣಗಳಲ್ಲಿ ಮಾರ್ಗಸೂಚಿಗಳನ್ನು ನೀಡಿದೆ. ಆದರೂ, ಕೆಲ ಸಂದರ್ಭಗಳಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳು ತಪ್ಪಾಗಿ ಕಾಗ್ನಿಜೆನ್ಸ್ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ, ಪರಿಸರ ವಿಚಾರಗಳ ಸಂಬಂಧ ವಿಚಾರಣೆ ನಡೆಸುವ ಮ್ಯಾಜಿಸ್ಟ್ರೇಟ್ ಹಾಗೂ ನ್ಯಾಯಾಂಗ ಅಧಿಕಾರಿಗಳಿಗೆ ಕಾಗ್ನಿಜೆನ್ಸ್ ಕುರಿತಂತೆ ಈ ಹಿಂದೆ ನೀಡಿರುವ ಆದೇಶದ ಪ್ರತಿಗಳನ್ನು ತಲುಪಿಸಬೇಕು ಎಂದು ಹೈಕೋರ್ಟ್ ರಿಜಿಸ್ಟ್ರಾರ್‌ಗೆ ನ್ಯಾಯಪೀಠ ಸೂಚನೆ ನೀಡಿದೆ.

ಇದನ್ನೂ ಓದಿ:ಬಿಬಿಎಂಪಿ ವಾರ್ಡ್ ಪುನರ್ ವಿಂಗಡಣೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಪ್ರಕರಣದ ಹಿನ್ನೆಲೆ?: ಹೊಸಕೋಟೆ ತಾಲೂಕಿನ ನಂದಗುಡಿ ಬಳಿಯ ಬೀರಹಳ್ಳಿ ಎಂಬಲ್ಲಿ ಬಿ.ವಿ.ಬೈರೇಗೌಡ ಎಂಬುವರು ಕಲ್ಲು ಕ್ವಾರಿ ನಡೆಸುತ್ತಿದ್ದಾರೆ. ಈ ಕ್ವಾರಿಯಲ್ಲಿ ಪರಿಸರ ಮಾಲಿನ್ಯ ಮತ್ತು ನೀರು ಕಾಯ್ದೆ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಹೊಸಕೋಟೆಯ ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿಯ ಪ್ರಾದೇಶಿಕ ಕಚೇರಿಯ ಉಪ ಪರಿಸರ ಅಧಿಕಾರಿ ಪಿ.ಸುನಿತಾ ಜೆಎಂಎಫ್‌ಸಿಯ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ದೂರು ದಾಖಲಿಸಿಕೊಂಡಿದ್ದ ನ್ಯಾಯಾಲಯ, ಭೈರೇಗೌಡ ಅವರ ವಿರುದ್ಧ ಕಾಗ್ನಿಜೆನ್ಸ್ ಪಡೆದುಕೊಂಡು ವಿಚಾರಣೆ ನಡೆಸುತ್ತಿತ್ತು. ಇದನ್ನು ಪ್ರಶ್ನಿಸಿದ್ದ ಭೈರೇಗೌಡ ಕಾನೂನು ಬಾಹಿರವಾಗಿ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹೀಗಾಗಿ, ತಮ್ಮ ವಿರುದ್ಧದ ವಿಚಾರಣೆಯನ್ನು ರದ್ದು ಮಾಡಬೇಕು ಎಂದು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರವಾಗಿ ವಕೀಲ ವಿ. ಕಾರ್ತಿಕ್ ವಾದ ಮಂಡಿಸಿದ್ದರು.

ABOUT THE AUTHOR

...view details