ಬೆಂಗಳೂರು :ಊರ ಹಬ್ಬದಲ್ಲಿ ನಡೆದ ಗಲಾಟೆಯಲ್ಲಿ ಎದುರಾಳಿಯ ವೃಷಣಗಳನ್ನು ಹಿಸುಕಿ ಗಂಭೀರವಾಗಿ ಗಾಯಗೊಳಿಸಿದ ವ್ಯಕ್ತಿಗೆ ‘ಕೊಲೆ ಯತ್ನ’(ಐಪಿಸಿ 307)ಅಡಿ ಅಪರಾಧವೆಂದು ಭಾವಿಸಿ ವಿಚಾರಣಾ ನ್ಯಾಯಾಲಯ 7 ವರ್ಷ ಕಾರಾಗೃಹ ಶಿಕ್ಷೆಯನ್ನು ವಿಧಿಸಿತ್ತು. ಇದೀಗ ಹೈಕೋರ್ಟ್ 3 ವರ್ಷಕ್ಕೆ ಕಾರಾಗೃಹ ಶಿಕ್ಷೆಯನ್ನು ಇಳಿಕೆ ಮಾಡಿದೆ. ಜೊತೆಗೆ, ಉದ್ದೇಶಪೂರ್ವಕವಾಗಿ ಅಪಮಾನ ಮಾಡಿದ ಮತ್ತು ಅಕ್ರಮವಾಗಿ ತಡೆಹಿಡಿದ ಅಪರಾಧಕ್ಕೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ಪ್ರಮಾಣವನ್ನು ಎತ್ತಿಹಿಡಿದಿದೆ.
ಕೊಲೆ ಯತ್ನದ ಅಪರಾಧಕ್ಕಾಗಿ 7 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ಚಿಕ್ಕಮಗಳೂರಿನ ಪ್ರಧಾನ ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಕೋರಿ ಆರೋಪಿ ಪರಮೇಶ್ವರಪ್ಪ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ ಈ ಆದೇಶ ಮಾಡಿದೆ. ಅಲ್ಲದೆ, ಕೊಲೆ ಮಾಡುವ ಉದ್ದೇಶವಿಲ್ಲದೆ ಜಗಳವಾಡುವ ಸಂದರ್ಭದಲ್ಲಿ ವೃಷಣಗಳನ್ನು ಹಿಸುಕಿದರೆ ಅದು ಐಪಿಸಿ ಸೆಕ್ಷನ್ 307ರ (ಕೊಲೆ ಯತ್ನ) ಅಡಿಯಲ್ಲಿ ಅಪರಾಧವಾಗುವುದಿಲ್ಲ. ಬದಲಿಗೆ ಐಪಿಸಿ ಸೆಕ್ಷನ್ 325ರ (ಗಂಭೀರವಾಗಿ ಗಾಯಗೊಳಿಸುವ) ಅಡಿಯಲ್ಲಿ ಅಪರಾಧವೆನಿಸಲಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಕೊಲೆ ಯತ್ನದ ಬದಲಿಗೆ ಗಂಭೀರ ಗಾಯಗೊಳಿಸಿದ ಅಪರಾಧಕ್ಕಾಗಿ ಅರ್ಜಿದಾರನನ್ನು ದೋಷಿ ಎಂದು ತೀರ್ಮಾನಿಸಿದೆ. ಜೊತೆಗೆ, ವಿಚಾರಣಾ ನ್ಯಾಯಾಲಯ ವಿಧಿಸಿದ್ದ 7 ವರ್ಷ ಶಿಕ್ಷೆಯನ್ನು ಮಾರ್ಪಾಡುಗೊಳಿಸಿ, 3 ವರ್ಷ ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ದಂಡದ ಮೊತ್ತವನ್ನು ಸಂತ್ರಸ್ತ ವ್ಯಕ್ತಿಗೆ ಪರಿಹಾರವಾಗಿ ಪಾವತಿಸುವಂತೆ ಅಪರಾಧಿಗೆ ನಿರ್ದೇಶನ ನೀಡಿದೆ.
ಸಾಕ್ಷ್ಯಧಾರ ಮತ್ತು ಪ್ರತ್ಯಕ್ಷ ಸಾಕ್ಷಿ ಪ್ರಕಾರ ಆರೋಪಿ ಮತ್ತು ಗಾಯಾಳು ನಡುವೆ ಮೊದಲೆ ದ್ವೇಷವಿತ್ತು. ಈ ಹಿನ್ನೆಲೆಯಲ್ಲಿ ಊರ ಜಾತ್ರೆ-ಮೆರವಣಿಗೆ ಗಾಯಾಳು ಕುಣಿಯುತ್ತಿದ್ದ ಸಂದರ್ಭದಲ್ಲಿ ಗಲಾಟೆ ಪ್ರಾರಂಭಿಸಿ ಆತನ ವೃಷಣಗಳನ್ನು ಹಿಸುಕಿದ್ದಾನೆ. ಆತನನ್ನು ಆಸ್ಪತ್ರೆಗೆ ಕರೆದೊಯ್ದಾದಾಗ ವೈದ್ಯರು ಗಾಯಾಳುವಿನ ಎಡ ಭಾಗದ ವೃಷಣ ತೆಗೆದು ಜೀವ ಉಳಿಸಿದ್ದರು. ವೃಷಣವು ದೇಹದ ಸೂಕ್ಷ್ಮ ಮತ್ತು ಪ್ರಮುಖ ಅಂಗ. ತಕ್ಷಣವೇ ಗಾಯಾಳುವಿಗೆ ಚಿಕಿತ್ಸೆ ಸಿಗದಿದ್ದರೆ ಆತ ಸಾಯುವ ಸಾಧ್ಯತೆಯಿತ್ತು. ವೃಷಣವನ್ನು ಗಾಯಗೊಳಿಸಿದರೆ ಜೀವಕ್ಕೆ ಅಪಾಯವಾಗಲಿದೆ ಎಂಬ ತಿಳುವಳಿಕೆ ಆರೋಪಿಗೆ ಇರಲಿಲ್ಲ ಎಂಬುದನ್ನು ಒಪ್ಪಲು ಸಾಧ್ಯವಿಲ್ಲ.