ಬೆಂಗಳೂರು : ಕಾಂಗ್ರೆಸ್ನ ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್ 2 ಸಿನಿಮಾದ ಹಾಡು ಬಳಕೆ ಮಾಡಿಕೊಂಡು ಹಕ್ಕುಸ್ವಾಮ್ಯ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗು ಮತ್ತಿತರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಲು ಕೋರಿ ಕಾಂಗ್ರೆಸ್ ಪಕ್ಷದ ಸಂವಹನಾ ಮತ್ತು ಪ್ರಚಾರ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಸಾಮಾಜಿಕ ಜಾಲತಾಣಗಳ ವಿಭಾಗದ ಮುಖ್ಯಸ್ಥ ಸುಪ್ರಿಯಾ ಶ್ರೀನಾಟೆ ಮತ್ತು ರಾಹುಲ್ ಗಾಂಧಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ತೀರ್ಪು ಕಾಯ್ದಿರಿಸಿತು. ಅಲ್ಲದೆ, ಅರ್ಜಿ ಇತ್ಯರ್ಥವಾಗುವವರೆಗೂ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನೇ ಅರ್ಜಿ ಇತ್ಯರ್ಥ ವಾಗುವವರೆಗೂ ವಿಸ್ತರಿಸಿ ವಿಚಾರಣೆ ಮುಂದೂಡಿದೆ.
ಅರ್ಜಿದಾರರ ಪರ ವಾದ ಮಂಡಿಸಿ ಹಿರಿಯ ವಕೀಲ ವಿಕ್ರಮ ಹುಯಿಲಗೋಳ, ಪ್ರಕರಣದಲ್ಲಿ ಭಾರತೀಯ ಕಾಂಗ್ರೆಸ್ ಮತ್ತು ಭಾರತ್ ಜೋಡೋ ಟ್ವಿಟರ್ ಖಾತೆಗಳನ್ನು ಮೊದಲನೆಯ ಮತ್ತು ಎರಡನೇ ಅರ್ಜಿದಾರರು ನಿರ್ವಹಣೆ ಮಾಡುತ್ತಿದ್ದಾರೆ. ಮೂರನೇ ಅರ್ಜಿದಾರ ರಾಹುಲ್ ಗಾಂಧಿ ನಡೆದು ಹೋಗುವ ದೃಶ್ಯಕ್ಕೆ ಸಿನಿಮಾದ ಹಾಡನ್ನು ಸೇರಿಸಲಾಗಿದೆ. ಇದರಲ್ಲಿ ಅವರ ಪಾತ್ರ ಇಲ್ಲ. ಆದರೂ ಅವರನ್ನು ಪ್ರಕರಣದಲ್ಲಿ ಸೇರಿಸಲಾಗಿದೆ. ಹೀಗಾಗಿ ಪ್ರಕರಣ ರದ್ದು ಮಾಡಬೇಕು ಎಂದು ಕೋರಿದರು.
ಕೃತಿಸ್ವಾಮ್ಯ ಕಾಯಿದೆ ಸೆಕ್ಷನ್ 63ರ ಅಡಿ ಅಪರಾಧ ಎನಿಸಲು ಆರೋಪಿಯು ಉದ್ದೇಶಪೂರ್ವಕವಾಗಿ ಹಕ್ಕುಸ್ವಾಮ್ಯ ಉಲ್ಲಂಘಿಸಬೇಕು. ಆದರೆ, ಹಾಲಿ ಪ್ರಕರಣದಲ್ಲಿ ಆ ಉದ್ದೇಶವಿಲ್ಲ. ಇದಲ್ಲದೇ ಅರ್ಜಿದಾರರು ಯಾವುದೇ ರೀತಿಯಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆಯಿಂದ ಆರ್ಥಿಕ ಲಾಭ ಪಡೆದಿಲ್ಲ ಎಂದು ಹುಯಿಲಗೋಳ ವಾದಿಸಿದರು.
ರಾಹುಲ್ ಗಾಂಧಿ ಅವರು ಭಾರತ ಜೋಡೊ ಯಾತ್ರೆಯಲ್ಲಿ ಭಾಗವಹಿಸಿದ್ದರು. ಅವರು ವಿಡಿಯೊವನ್ನು ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿಲ್ಲ. ಜೈರಾಮ್ ರಮೇಶ್ ಅಥವಾ ಸುಪ್ರಿಯಾ ಅವರು ವಿಷಯ (ಕಂಟೆಂಟ್) ರೂಪಿಸಿಲ್ಲ. ಆ ಮೂಲಕ ಹಕ್ಕುಸ್ವಾಮ್ಯ ಕಾಯಿದೆ ಉಲ್ಲಂಘಿಸಿಲ್ಲ. ಹಕ್ಕುಸ್ವಾಮ್ಯ ಕಾಯಿದೆ ಸೆಕ್ಷನ್ 63ರ ಅಡಿ ಕ್ರಿಮಿನಲ್ ಪ್ರಾಸಿಕ್ಯೂಷನ್ ನಡೆಸಲು ಉದ್ದೇಶಪೂರ್ವಕವಾಗಿ ಅದನ್ನು ಉಲ್ಲಂಘಿಸಬೇಕು. ದೂರಿನಲ್ಲಿ ಉದ್ದೇಶಪೂರ್ವಕಾಗಿ ಅರ್ಜಿದಾರರು ಹಕ್ಕುಸ್ವಾಮ್ಯ ಉಲ್ಲಂಘಿಸಿದ್ದಾರೆ ಎಂಬ ಅಂಶ ಎಲ್ಲಿದೆ? ಎಂದು ವಿಕ್ರಮ ಹುಯಿಲಗೋಳ ವಾದಿಸಿದರು.
ಎಂಆರ್‌ಟಿ ಮ್ಯೂಸಿಕ್ ಪರ ವಾದ ಮಂಡಿಸಿದ ವಕೀಲರು, ಈ ಹಿಂದೆ ಇದೇ ಆರೋಪ ಸಂಬಂಧ ಕಾಂಗ್ರೆಸ್ ಪಕ್ಷ ಮತ್ತು ಭಾರತ್ ಜೋಡೋ ಸಂಬಂಧಿತ ಟ್ವಿಟರ್ ಖಾತೆಗಳ ಮೇಲೆ ನಿರ್ಬಂಧ ವಿಧಿಸುವಂತೆ ಸೂಚನೆ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು, ಹೌದು ನಾವು ಕೆಜಿಎಫ್ 2 ಸಂಗೀತವನ್ನು ತಪ್ಪಾಗಿ ಬಳಸಿಕೊಂಡಿದ್ದೇವೆ. ಅದನ್ನು ತೆಗೆದು ಹಾಕಲಾಗುವುದು ಎಂದು ಭರವಸೆ ನಿಡಿದ್ದರು. ಆದರೆ, ಇಂದಿಗೂ ಅದನ್ನು ಮಾರ್ಪಡಿಸಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ವಾದ- ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ತೀರ್ಪು ಕಾಯ್ದಿರಿಸಿದ್ದಾರೆ. ಅರ್ಜಿದಾರರ ಪರ ವಕೀಲರಾದ ಲೀಲಾ ದೇವಾಡಿಗ ವಕಾಲತ್ತು ವಹಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ:ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ದೇಶಾದ್ಯಂತ ಪ್ರವಾಸ ಮಾಡಿದ್ದರು. ಕರ್ನಾಟಕದಲ್ಲಿ 21 ದಿನಗಳನ್ನು ಕಳೆದಿದ್ದರು. ಸೆಪ್ಟೆಂಬರ್ 31, 2022 ರಿಂದ ಅಕ್ಟೋಬರ್ 19, 2022ರವರೆಗೆ ಏಳು ಜಿಲ್ಲೆಗಳನ್ನು ಒಳಗೊಂಡ 511 ಕಿಲೋಮೀಟರ್ ದೂರ ಪ್ರಯಾಣಿಸಿದ್ದರು. ಚಾಮರಾಜನಗರದಿಂದ ಯಾತ್ರೆ ಆರಂಭಿಸಿದ ರಾಹುಲ್ ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸಂಚರಿಸಿದ್ದರು.
ಇದನ್ನೂ ಓದಿ :ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯ ದೃಶ್ಯಕ್ಕೆ ಕೆಜಿಎಫ್ ಸಿನಿಮಾ ಹಾಡು ಬಳಕೆ: ರಾಹುಲ್ ಗಾಂಧಿ ವಿರುದ್ಧದ ತನಿಖೆಗಿದ್ದ ತಡೆಯಾಜ್ಞೆ ವಿಸ್ತರಣೆ