ಬೆಂಗಳೂರು:ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಸೋಮವಾರ ಒಂದೇ ದಿನ 522 ಪ್ರಕರಣಗಳನ್ನು ವಿಚಾರಣೆ ನಡೆಸಿದೆ. ಹೈಕೋರ್ಟ್ ನ್ಯಾಯಪೀಠಗಳು ದಿನಕ್ಕೆ 200 ಅಥವಾ ಗರಿಷ್ಠ ಎಂದರೆ 300 ಪ್ರಕರಣಗಳನ್ನು ವಿಷಯ ಪಟ್ಟಿಗೆ (ಕಾಸ್ ಲಿಸ್ಟ್)ಗೆ ಹಾಕಿಸಿ ಅವುಗಳ ವಿಚಾರಣೆ ನಡೆಸುವುದು ಸಾಮಾನ್ಯ. ಬಹುತೇಕ ಪ್ರಕರಣ ವಿಚಾರಣೆ ನಡೆಸಿ ಉಳಿದ ಪ್ರಕರಣಗಳಿಗೆ ಸಮಯದ ಅಭಾವ ಉಂಟಾದರೆ ಅವುಗಳನ್ನು ಮುಂದೂಡಲಾಗುತ್ತದೆ.
ನಿಗದಿಪಡಿಸಿದ ಎಲ್ಲ ಪ್ರಕರಣಗಳ ವಿಚಾರಣೆ ನಡೆಸಿ ಹೊಸ ಮೈಲಿಗಲ್ಲು:ಇದೇ ಮೊದಲ ಬಾರಿ ನ್ಯಾಯಮೂರ್ತಿ ನಾಗಪ್ರಸನ್ನ ಅವರು 522 ಪ್ರಕರಣಗಳನ್ನು ವಿಚಾರಣೆಗೆ ನಿಗದಿಪಡಿಸಿ, ಬಹುತೇಕ ಅಷ್ಟೂ ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ. ಕೆಲವು ತಿಂಗಳ ಹಿಂದೆ ಇದೇ ನ್ಯಾಯಮೂರ್ತಿಗಳ ಮುಂದೆ 480ಕ್ಕೂ ಅಧಿಕ ಪ್ರಕರಣಗಳನ್ನು ಪಟ್ಟಿ ಮಾಡಲಾಗಿತ್ತು. ಬಹುತೇಕ ಎಲ್ಲಾ ಪ್ರಕರಣಗಳನ್ನು ಅಂದು ವಿಚಾರಣೆ ನಡೆಸಿದ್ದರು.
ಪ್ರಾಸಿಕ್ಯೂಷನ್ ಇಲಾಖೆ ಪ್ರಭಾರ ನಿರ್ದೇಶಕರನ್ನಾಗಿ ಹೆಚ್ ಕೆ ಜಗದೀಶ್ ನೇಮಕ ಪ್ರಶ್ನಿಸಿ ಪಿಐಎಲ್: ಪ್ರಾಸಿಕ್ಯೂಷನ್ ಇಲಾಖೆಯ ಪ್ರಭಾರ ನಿರ್ದೇಶಕರಾಗಿ ಹೆಚ್.ಕೆ.ಜಗದೀಶ್ ಅವರನ್ನು ನೇಮಕ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಸುಧಾ ಕಟ್ವಾ ಎಂಬುವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಎಂ.ಜೆ.ಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಮುಂದೂಡಿದೆ.