ಬೆಂಗಳೂರು: ಸಚಿವ ಡಾ. ಸುಧಾಕರ್ ಹೇಳಿಕೆಯ ಕುರಿತು ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದ ತನಿಖೆಗೆ ತಕ್ಷಣವೇ ಆದೇಶ ಹೊರಡಿಸಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿರುವ ಅವರು, ಡಾ.ಸುಧಾಕರ್ ಅವರು ಹೇಳಿರುವಂತೆ 225 ಸದಸ್ಯರ ಪೈಕಿ ತಾವೂ ಕೂಡ ಒಬ್ಬರಾಗಿರುವುದರಿಂದ ಸದರಿ ತನಿಖೆಗೆ ಸಿದ್ಧರಿದ್ದೀರಾ ಎಂದು ತಿಳಿಯಲಿಚ್ಚಿಸುತ್ತೇವೆ. ಈ ಎಲ್ಲಾ ಕಾರಣಗಳಿಂದ ಸಚಿವ ಸುಧಾಕರ್ ಅವರ ಹೇಳಿಕೆಯನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕು. ಈಗಾಗಲೇ ಕಾಂಗ್ರೆಸ್ ಪಕ್ಷವು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಹಾಗೂ ಡಾ.ಸುಧಾಕರ್ ಅವರೂ ಸೇರಿದಂತೆ ಆರು ಮಂದಿ ಸಚಿವರು ಸುದ್ದಿ ಮಾಧ್ಯಮಗಳಲ್ಲಿ ತಮ್ಮ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದನ್ನು ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್.ಐ.ಟಿ ತನಿಖೆಗೆ ಒತ್ತಾಯಿಸಿದೆ. ಸುಧಾಕರ್ ಅವರು ಹೆಸರಿಸಿರುವವರ ಪೈಕಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ರಮೇಶ್ ಕುಮಾರ್ ಆದ ನಾವೂ ಕೂಡ ಕೋರ್ಟ್ ಉಸ್ತುವಾರಿಯ ಎಸ್.ಐ.ಟಿ ತನಿಖೆಗೆ ಒಳಪಡಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.