ಬೆಂಗಳೂರು: ಐಎಂಎನಲ್ಲಿ ಹೂಡಿಕೆ ಮಾಡಿದ್ದ 2,695 ಕೋಟಿ ರೂಪಾಯಿ ಠೇವಣಿ ಹಿಂದಿರುಗಿಸಲು ಕೋರಿ ಒಟ್ಟು 65,258 ಕ್ಲೇಮು ಅರ್ಜಿಗಳನ್ನು ಸ್ವೀಕರಿಸಿದ್ದೇವೆ ಎಂದು ಸಕ್ಷಮ ಪ್ರಾಧಿಕಾರ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಈ ಕುರಿತು ಇಮ್ರಾನ್ ಪಾಷಾ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಈ ಮಾಹಿತಿ ನೀಡಲಾಗಿದೆ.
ಸಕ್ಷಮ ಪ್ರಾಧಿಕಾರದ ವಿಶೇಷಾಧಿಕಾರಿ ಹರ್ಷಗುಪ್ತಾ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ 2695.13 ಕೋಟಿ ರೂ. ಠೇವಣಿ ಹಿಂದಿರುಗಿಸಲು ಕೋರಿ 69,099 ಖಾತೆದಾರರು 65,258 ಕ್ಲೇಮು ಅರ್ಜಿಗಳನ್ನು ಸಲ್ಲಿಸಿದ್ದಾರೆ. ಮೊದಲ ಹಂತದಲ್ಲಿ 45 ಸಾವಿರ ಕ್ಲೇಮು ಅರ್ಜಿಗಳ ಪರಿಶೀಲನೆ ಕಾರ್ಯ ಪೂರ್ಣಗೊಂಡಿದೆ. ಉಳಿದ ಅರ್ಜಿಗಳ ಪರಿಶೀಲನೆಗೆ ಮತ್ತೊಂದು ತಿಂಗಳ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.