ಕರ್ನಾಟಕ

karnataka

ETV Bharat / state

ವಿಶ್ವಪ್ರಿಯ ಫೈನಾನ್ಸ್​ ವಂಚನೆ ಕೇಸ್​: ಸಿಬಿಐ ತನಿಖೆ ಕೋರಿದ ಅರ್ಜಿ, ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ - ಹೈಕೋರ್ಟ್ ಸುದ್ದಿ

ತಮಿಳುನಾಡು ಮೂಲದ ವಿಶ್ವಪ್ರಿಯ ಫೈನಾನ್ಸಿಯಲ್ ಸರ್ವಿಸಸ್ ಸೆಕ್ಯೂರಿಟೀಸ್ ಸಂಸ್ಥೆ ವಿರುದ್ಧ ದಾಖಲಿಸಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

High Court
ಹೈಕೋರ್ಟ್

By

Published : Mar 5, 2021, 6:57 AM IST

ಬೆಂಗಳೂರು:ಹೂಡಿಕೆದಾರರಿಗೆ ವಂಚನೆ ಮಾಡಿರುವ ಆರೋಪದಡಿ ತಮಿಳುನಾಡು ಮೂಲದ ವಿಶ್ವಪ್ರಿಯ ಫೈನಾನ್ಸಿಯಲ್ ಸರ್ವಿಸಸ್ ಸೆಕ್ಯೂರಿಟೀಸ್ ಸಂಸ್ಥೆ ವಿರುದ್ಧ ದಾಖಲಿಸಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಈ ಸಂಬಂಧ ವಿಶ್ವಪ್ರಿಯ ಇನ್ವೆಸ್ಟರ್ಸ್ ಆ್ಯಂಡ್ ಡೆಪಾಸಿಟರ್ಸ್ ವೆಲ್​ಫೇರ್ ಅಸೋಸಿಯೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ, ನಗರ ಪೊಲೀಸ್ ಆಯುಕ್ತ, ನಗರ ದಕ್ಷಿಣ ವಿಭಾಗದ ಡಿಸಿಪಿ, ಗಿರಿನಗರ, ಸಿದ್ದಾಪುರ, ಜಯನಗರ, ವೈಟ್ ಫೀಲ್ಡ್, ಮಲ್ಲೇಶ್ವರಂ, ಅಲಸೂರು, ಮಾರತ್ತಹಳ್ಳಿ ಠಾಣೆ ಇನ್ಸಪೆಕ್ಟರ್​ಗಳಿಗೆ ನೋಟಿಸ್ ಜಾರಿ ಮಾಡಿತು.

ಇನ್ನು ಅರ್ಜಿ ವಿಚಾರಣೆ ಪ್ರಾಥಮಿಕ ಹಂತದಲ್ಲಿರುವುದರಿಂದ ಸಿಬಿಐಗೆ ನೋಟಿಸ್ ಜಾರಿ ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು, ವಿಚಾರಣೆಯನ್ನು ಮಾ.31ಕ್ಕೆ ಮುಂದೂಡಿತು.

ಅರ್ಜಿದಾರರ ಕೋರಿಕೆ: 2012-13ರಲ್ಲಿ ಸುಬ್ರಮಣಿಯನ್, ನಾರಾಯಣ್ ಮತ್ತಿತರರು ತಾವು ತಮಿಳುನಾಡು ಮೂಲದ ವಿಶ್ವಪ್ರಿಯ ಫೈನಾನ್ಸಿಯಲ್ ಸರ್ವೀಸಸ್ ಸೆಕ್ಯೂರಿಟೀಸ್ ಏಜೆನ್ಸಿಯವರು ಎಂದು ಹೇಳಿಕೊಂಡು ನಮ್ಮ ಮನೆಗಳ ಬಳಿಯೇ ಬಂದು ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದರು. ಅದರಂತೆ ಲಕ್ಷಾಂತರ ರೂಪಾಯಿ ಹಣವನ್ನು ಸಂಸ್ಥೆ ಹೆಸರಲ್ಲಿ ಠೇವಣಿ ಇರಿಸಿದ್ದೆವು. ಈ ರೀತಿ ನಗರದ ಸಾವಿರಾರು ಜನರು 200 ರಿಂದ 300 ಕೋಟಿ ರೂಪಾಯಿ ಹೂಡಿಕೆ ಮಾಡಿರುವ ಮಾಹಿತಿ ಇದೆ. ಇದಕ್ಕೆ ಕಂಪನಿ ವಾರ್ಷಿಕ ಶೇ. 10.47 ರಷ್ಟು ರಿಟರ್ಸ್ ಕೊಡುವುದಾಗಿ ಭರವಸೆ ನೀಡಿತ್ತು.

ಒಂದೆರಡು ವರ್ಷಗಳು ಕಳೆದರೂ ಸಂಸ್ಥೆ ಹಣ ಹಿಂದಿರುಗಿಸದ ಹಿನ್ನೆಲೆಯಲ್ಲಿ ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಕಚೇರಿಗೆ ತೆರಳಿ ವಿಚಾರಿಸಿದ್ದೆವು. ಆದರೆ, ಸಂಸ್ಥೆ ಹೂಡಿಕೆ ಮಾಡಿದ್ದ ಹಣ ಹಿಂದಿರುಗಿಸಲು ನೆಪಗಳನ್ನೇ ಹೇಳಿಕೊಂಡು ಬಂದಿತು. ಹಣ ಬಾರದ ಹಿನ್ನೆಲೆಯಲ್ಲಿ 2020ರ ಡಿ. 29ರಂದು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಸಂಸ್ಥೆ ಹಾಗೂ ಏಜೆಂಟರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಕೆಪಿಐಡಿ ಹಾಗೂ ಐಪಿಸಿಯ ವಿವಿಧ ಸೆಕ್ಷನ್ ಗಳ ಅಡಿ ಎಫ್ಐಆರ್ ದಾಖಲಿಸಿಕೊಂಡಿದ್ದರೂ, ತನಿಖೆ ಚುರುಕಾಗಿಲ್ಲ ಹಾಗೂ ಪ್ರಗತಿ ಕಾಣುತ್ತಿಲ್ಲ. ಆದ್ದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ABOUT THE AUTHOR

...view details